ಹೈದರಾಬಾದ್,
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಲನ ಚಿತ್ರವು ಬಿಡುಗಡೆಯ ದಿನಾಂಕದ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ಗೊಂದಲ ಶುರುವಾಗಿದೆ. ಮೇ 9ರಂದು ಸಿನಿಮಾ ಬಿಡುಗಡೆ ಮಾಡಲು ತಂಡ ನಿರ್ಧರಿಸಿತ್ತು. ಆದರೆ, ಇದೇ ಸಂದರ್ಭದಲ್ಲಿ ತೆಲುಗು ಉಭಯ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಈ ಕಾರಣಕ್ಕೆ ಸಿನಿಮಾ ಬಿಡುಗಡೆಯ ದಿನಾಂಕ ಮುಂದೂಡಿಕೊಳ್ಳಬೇಕಾದ ಅನಿವಾರ್ಯತೆ ತಂಡಕ್ಕೆ ಎದುರಾಗಿದೆ. ಇದಕ್ಕಾಗಿ ನಿರ್ಮಾಪಕ ಸಿ. ಅಶ್ವಿನಿ ದತ್ ಅವರು ಹೊಸ ದಿನಾಂಕಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಆಗಿರೋ ಕಾರಣ ಆಗಸ್ಟ್ 15 ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ರೂಪಿಸಿದ್ದಾರೆ ಎಂದು ವರದಿ ಆಗಿದೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಮೇ 13ರಂದು ಮತದಾನ ನಡೆಯಲಿದೆ. ಚುನಾವಣೆ ಎಂದರೆ ಎಲ್ಲರ ಗಮನ ಅತ್ತವೇ ಇರುತ್ತದೆ. ಸೆಲೆಬ್ರಿಟಿಗಳು ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗುತ್ತಾರೆ. ಇಂಥ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಚಿತ್ರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡದೇ ಇರಬಹುದು ಎನ್ನುವ ಭಯ ‘ಕಲ್ಕಿ 2898 ಎಡಿ’ ಚಿತ್ರವನ್ನು ಬಹುವಾಗಿ ಕಾಡಿದೆ. ಹೀಗಾಗಿ, ಬಿಡುಗಡೆಯ ದಿನಾಂಕದಲ್ಲಿ ಬದಲಾವಣೆ ಮಾಡಿಕೊಳ್ಳೋ ಆಲೋಚನೆಯನ್ನು ತಂಡ ಮಾಡುತ್ತಿದೆ.
ಪ್ಯಾನ್ ಇಂಡಿಯಾ ಎನ್ನುವ ಕಾರಣಕ್ಕೆ ಸ್ವಾಂತತ್ರ್ಯ ದಿನಾಚರಣೆ ಮೇಲೆ ‘ಕಲ್ಕಿ 2898 ಎಡಿ’ ಸಿನಿಮಾ ಕಣ್ಣಿಟ್ಟಿದೆ. ಈಗಾಗಲೇ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಹಾಗೂ ಕನ್ನಡದಲ್ಲಿ ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಈ ಡೇಟ್ನ ಲಾಕ್ ಮಾಡಿವೆ. ಇದರ ಜೊತೆ ‘ಕಲ್ಕಿ 2898 ಎಡಿ’ ಸಿನಿಮಾ ಕೂಡ ಬರುತ್ತದೆ ಎಂದರೆ ಸ್ಪರ್ಧೆ ಜೋರಾಗಲಿದೆ
