ಮಡಿಕೇರಿ,18 ಅಕ್ಟೋಬರ್ (ಹಿ.ಸ):
ಆ್ಯಂಕರ್ :
ದಕ್ಷಿಣ ಮಂದಾಕಿನ, ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ, ಕೊಡರವ ಖ್ಯಾತ ಯಾತ್ರಾ ತಾಣ ತಲಕಾವೇರಿಯಲ್ಲಿ “ಕಾವೇರಿ” ಮಾತೆ ತೀರ್ಥರೂಪಿಣಿಯಾಗಿ ಆವಿರ್ಭವಿಸಿದ್ದಾಳೆ. ತಡರಾತ್ರಿ 1 ಗಂಟೆ 27 ನಿಮಿಷಕ್ಕೆ ಸರಿಯಾಗಿ ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ತೀರ್ಥೋದ್ಭವವಾಗಿದೆ. ಈ ತೀರ್ಥೋದ್ಭವದ ದರ್ಶನ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಈ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತರ ಮೇಲೆ ಅರ್ಚಕರು ಕಾವೇರಿ ಕಾವೇರಿ ನೀರನ್ನು ಎರಚಿದ್ದು, ತೀರ್ಥ ಪ್ರೋಕ್ಷಣೆಯಿಂದ ಭಕ್ತರು ಪುನೀತರಾದರು.
ಪ್ರಧಾನ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಮುಂಜಾಗ್ರತಾ ಕ್ರಮವಾಗಿ ಸಂಜೆ 4 ಗಂಟೆಯಿಂದಲೇ ಬ್ರಹ್ಮ ಕುಂಡಿಕೆ ಬಳಿಗೆ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ತಲಕಾವೇರಿಗೆ ವಾಹನಗಳ ಪ್ರವೇಶ ನಿಷೇಧಿಸಲಾಗಿದ್ದು, ಭಕ್ತರ ಪ್ರಯಾಣಕ್ಕೆ ಉಚಿತ ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು.
ಪ್ರಧಾನ ಅರ್ಚಕರಾದ ಪ್ರಶಾಂತ್ ಆಚಾರ್, ಗುರುರಾಜ ಅಚಾರ, ರವಿರಾಜ್ ಆಚಾರ್ ನೇತೃತ್ವದಲ್ಲಿ ಬ್ರಹ್ಮ ಕುಂಡಿಕೆ ಮತ್ತು ಕಾವೇರಿ ಮೂರ್ತಿಗೆ ಮಹಾಸಂಕಲ್ಪ, ಪಂಚಾಮೃತ ಅಭಿಷೇಕ, ಸೂಕ್ತಾಭಿಷೇಕ ಮತ್ತು ವಿಶೇಷ ಅಲಂಕಾರ ಮಾಡಲಾಯ್ತು. ಬಳಿಕ ಕುಂಕುಮಾರ್ಚನೆ, ಗಂಗಾ ಸಹಸ್ರನಾಮಾರ್ಚನೆ, ಮಹಾಅರ್ಘ್ಯ ಅರ್ಚನೆ ಪೂಜೆ ನೆರವೇರಿತು. ಈ ವೇಳ ಭಕ್ತರ ಝೇಂಕಾರ ಮುಗಿಲುಮುಟ್ಟಿತು.
ಹಿಂದೂಸ್ತಾನ್ ಸಮಾಚಾರ್
