ನವದೆಹಲಿ, 24 ಫೆಬ್ರವರಿ :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ನವದೆಹಲಿಯ ಭಾರತ ಮಂಟಪದಲ್ಲಿ ಇಂದು ಸಹಕಾರಿ ವಲಯದಲ್ಲಿನ ಹಲವಾರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿ ಹಾಗೂ ನಾನಾ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಅರ್ಥವ್ಯವಸ್ಥೆಯ ಕಾರ್ಯಕಲ್ಪಕ್ಕೆ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ರೈತರ ಬದುಕನ್ನು ಹಸನುಗೊಳಿಸುವಲ್ಲಿ ಈ ಕ್ಷೇತ್ರ ಸಹಕಾರಿಯಾಗಿದೆ ಎಂದು ಹೇಳಿದರು.
ಸಹಕಾರ ವ್ಯವಸ್ಥೆ ಅತ್ಯಂತ ಪ್ರಾಚೀನ ಆಂದೋಲನವಾಗಿದ್ದು, ಗ್ರಾಮೀಣ ಭಾಗದಲ್ಲಿ ಆರ್ಥಿಕವೃದ್ಧಿಗೆ ನೆರವಾಗಿದೆ. ಹನಿ ಹನಿಗೂಡಿದರೆ ಹಳ್ಳ ಎಂಬ ಗಾದೆಯ ಮಾತಿನಂತೆ ಸಹಕಾರಿಗಳು ಒಂದೆಡೆ ಸೇರಿ, ಗ್ರಾಮಗಳ ಅಭಿವೃದ್ಧಿಗೆ ಪೂರಕ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಹಕಾರಿ ಕ್ಷೇತ್ರ ಭದ್ರ ಬುನಾದಿಯಾಗಿದೆ. ಇದು ಕೇವಲ ವ್ಯವಸ್ಥೆಯಲ್ಲ, ಇದು ಭಾವನಾತ್ಮಕ ಮತ್ತು ಸ್ಫೂರ್ತಿದಾಯಕ ವ್ಯವಸ್ಥೆಯಾಗಿದೆ ಎಂದರು.
ರೈತ ಉತ್ಪಾದಕ ಸಂಘಟನೆ – ಎಫ್ಪಿಒಗಳ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸಣ್ಣ ಪ್ರಮಾಣದ ಉದ್ಯಮಿಗಳಾಗುತ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ೨ ಲಕ್ಷ ಸಹಕಾರಿ ಸಮಿತಿಗಳನ್ನು ರಚಿಸಲಾಗುವುದು. ಮೀನುಗಾರಿಕೆ ಕ್ಷೇತ್ರದಲ್ಲೂ ಸಹಕಾರಿ ಸಂಘಗಳ ವೃದ್ಧಿಗೆ ಒತ್ತು ನೀಡಲಾಗುವುದು. ಸಹಕಾರಿ ಸಂಘಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಸಲುವಾಗಿ ರಾಜ್ಯ ಸಹಕಾರಿ ಸಂಘಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಜತೆಗೆ ೭೦೦ ಲಕ್ಷ ಮೆಟ್ರಿಕ್ ಟನ್ ಧಾನ್ಯಗಳನ್ನು ದಾಸ್ತಾನು ಮಾಡುವ ಗೋದಾಮುಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒಂದು ಲಕ್ಷ ೨೫ ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ ಎಂದರು.
ವಿಧಾನಸಭೆ ಹಾಗೂ ಲೋಕಸಭೆಗಳಲ್ಲಿ ಮಹಿಳೆಯರಿಗೆ ಶೇಕಡ ೩೩ರಷ್ಟು ಮೀಸಲಾತಿ ನೀಡುವ ಕಾಯ್ದೆಗೆ ಸಂಸತ್ ಅನುಮೋದನೆ ನೀಡಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಅವರು, ಯೋಜನೆಯಡಿ ೧೮ ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕಂಪ್ಯೂಟರೀಕರಣಗೊಳಿಸುವ ಕಾರ್ಯಕ್ರಮಕ್ಕೂ ಅವರು ಚಾಲನೆ ನೀಡಿದರು. ಸಹಕಾರ್ ಸೆ ಸಮೃದ್ಧಿ ಅಭಿಯಾನದ ಅಡಿಯಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಶೇಷ ಒತ್ತು ನೀಡಿದೆ. ಇದೇ ಉದ್ದೇಶದಿಂದ ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವ ಖಾತೆ ಸೃಷ್ಟಿಸಿದ್ದಾರೆ ಎಂದು ಹೇಳಿದರು. ಕೃಷಿ ಸಚಿವ ಅರ್ಜುನ್ ಮುಂಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
