ಮುಂಬೈ, 31 ಜನವರಿ:
ಆ್ಯಂಕರ್ : ಆತಿಫ್ ಅಸ್ಲಾಂ ಹಿಂದಿ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಸಾಂಗ್ಗಳನ್ನು ನೀಡಿದ್ದಾರೆ. ಪಾಕ್ ಗಾಯಕ ಎನ್ನುವ ಕಾರಣಕ್ಕೆ ಕೆಲವು ವರ್ಷಗಳ ಕಾಲ ಅವರು ಬಾಲಿವುಡ್ನಲ್ಲಿ ನಿಷೇಧಕ್ಕೊಳಗಾಗಿದ್ದರು. ಅವರ ಹಾಡುಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಆತಿಫ್ ಅಸ್ಲಾಂ ಅವರ ಅಭಿಮಾನಿ ಬಳಗ ತುಂಬಾ ದೊಡ್ಡದಿದೆ. ಇದೀಗ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದು ಸಿಕ್ಕಿದೆ. ಅವರು ಮತ್ತೊಮ್ಮೆ ಬಾಲಿವುಡ್ಗೆ ಬರಲಿದ್ದಾರೆ. ಮುಂಬರುವ ಚಿತ್ರಕ್ಕಾಗಿ ಹಾಡೊಂದನ್ನು ಹಾಡಲಿದ್ದಾರೆ.
ಕೆಲವು ವರ್ಷಗಳ ಹಿಂದೆ ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಕೆಲಸ ಮಾಡುವುದರ ಮೇಲೆ ನಿಷೇಧ ಹೇರಲಾಯಿತು. ಆದರೆ, ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿಷೇಧದ ಅರ್ಜಿಯನ್ನು ತಿರಸ್ಕರಿಸಿತು. ಇದಾದ ಬಳಿಕ ಬಾಲಿವುಡ್ನ ಬಾಗಿಲನ್ನು ತೆರೆಯಲಾಗಿದೆ. ಈ ಆದೇಶ ಬಂದ ವರ್ಷಗಳ ನಂತರ ಬಾಲಿವುಡ್ಗೆ ಎಂಟ್ರಿ ಕೊಡಲಿರುವ ಪಟ್ಟಿಯಲ್ಲಿ ಮೊದಲ ಹೆಸರು ಅತಿಫ್ ಅಸ್ಲಾಂ ಅವರದ್ದು. 7 ವರ್ಷಗಳ ವಿರಾಮದ ನಂತರ ಅತಿಫ್ ಅಸ್ಲಾಂ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅಮಿತ್ ಕಸಾರಿಯಾ ಅವರ ನಿರ್ದೇಶನದ ‘ಲವ್ ಸ್ಟೋರಿ ಆಫ್ 90s’ ಚಿತ್ರದ ಮೂಲಕ ಅತಿಫ್ ಕಂಬ್ಯಾಕ್ ಮಾಡುತ್ತಿದ್ದಾರೆ.
ನಿಷೇಧದ ನಂತರ ಆತಿಫ್ ಅವರು ಹಿಂದಿ ಚಿತ್ರರಂಗದಿಂದ ದೂರ ಇದ್ದಿದ್ದರು. ಆದರೆ, ಈಗ ಮತ್ತೆ ಹಿಂದಿ ಚಿತ್ರರಂಗದಲ್ಲಿ ಹಾಡಲು ನಿರ್ಧರಿಸಿದ್ದಾರೆ. ಅತಿಫ್ 2002ರಲ್ಲಿ ‘ಜಲ್’ ಎಂಬ ಆಲ್ಬಂನೊಂದಿಗೆ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಅವರ ‘ವೋ ಲಮ್ಹೆ..’ ಹಾಡು ಜನರಿಗೆ ತುಂಬಾ ಇಷ್ಟವಾಯಿತು. ಆತಿಫ್ ಅಸ್ಲಾಂಗೆ ಜನಪ್ರಿಯತೆಯ ರುಚಿ ಕೊಟ್ಟ ಹಾಡು ಇದಾಗಿತ್ತು. ಇದರ ನಂತರ ಅವರು ಅನೇಕ ಹಿಟ್ ಹಾಡುಗಳನ್ನು ನೀಡಿದರು.
