ದುಬೈ, 28 ಫೆಬ್ರವರಿ :
ಆ್ಯಂಕರ್ :ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಚಿಣ್ಣರ ಚಂದ್ರ’ ಚಲನಚಿತ್ರವು ದುಬೈ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಇದೇ ಸಿನಿಮಾದಲ್ಲಿ ನಟಿಸಿರುವ ಬರಗೂರು ರಾಮಚಂದ್ರಪ್ಪ ಅವರ ಮೊಮ್ಮಗ ಆಕಾಂಕ್ಷ್ ಬರಗೂರ್ ಗೆ ಉತ್ತಮ ಬಾಲನಟ ಪ್ರಶಸ್ತಿಯೂ ದೊರಕಿದೆ. ಈ ಮುಂಚೆ ಆಕಾಂಕ್ಷ್ ಬರಗೂರ್, ಬಯಲಾಟದ ಭೀಮಣ್ಣ, ಭಾಗೀರಥಿ ಮತ್ತು ತಾಯಿ ಕಸ್ತೂರ್ ಗಾಂಧಿ ಚಿತ್ರಗಳಲ್ಲಿ ಅಭಿನಯಿಸಿದ್ದರು.
‘ಚಿಣ್ಣರ ಚಂದ್ರ’ ಸಿನಿಮಾವನ್ನು ಶ್ರೀ ಜಿ.ಎನ್. ಗೋವಿಂದರಾಜು (ರಾಜಶೇಖರ್) ನಿರ್ಮಾಣ ಮಾಡಿದ್ದರು. ‘ಚಿಣ್ಣರ ಚಂದ್ರ’ ಚಿತ್ರವು ಬರಗೂರರ ‘ಅಡಗೊಲಜ್ಜಿ’ ಎಂಬ ಕಾದಂಬರಿಯನ್ನು ಆಧರಿಸಿದೆ. ಬರಗೂರು ರಾಮಚಂದ್ರಪ್ಪ ಅವರೇ ಸಿನಿಮಾಕ್ಕೆ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
‘ಚಿಣ್ಣರ ಚಂದ್ರ’ ಸಿನಿಮಾವು ಅಲಹಾಬಾದ್ ಮತ್ತು ಮೇಲ್ಬೋರ್ನ್ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೂ ಆಯ್ಕೆಯಾಗಿತ್ತು. ‘ಚಿಣ್ಣರ ಚಂದ್ರ’ ಸಿನಿಮಾ ಶಿಕ್ಷಣದ ಮಹತ್ವವನ್ನು ಸಾದರಪಡಿಸುವ ಚಿತ್ರವಾಗಿದ್ದು, ಮಕ್ಕಳ ಮೂಲಕವೇ ಈ ಆಶಯವನ್ನು ಅಭಿವ್ಯಕ್ತಿಸಲಾಗಿದೆ. ಜೊತೆಗೆ ಸಮಾಜದಲ್ಲಿ ಸಮಾನತೆ, ಸೌಹಾರ್ದತೆಗಳು ನೆಲೆಸಬೇಕೆಂಬ ಸಂದೇಶವನ್ನು ನೀಡುತ್ತದೆ. ಅಡಗೊಲಜ್ಜಿಯ ಮೂಲಕ ಜನಪದ ಕತೆಗಳನ್ನು ಕೇಳುವ ಮಕ್ಕಳು ಸದಭಿರುಚಿ ಸಿನಿಮಾಗಳ ಅಗತ್ಯಕ್ಕಾಗಿ ಹಕ್ಕೊತ್ತಾಯ ಮಂಡಿಸುವ ವಿಶೇಷ ಪ್ರಸಂಗವನ್ನೂ ಈ ಚಿತ್ರವು ಒಳಗೊಂಡಿದೆ.
