ಬೆಂಗಳೂರು, 1 ಡಿಸೆಂಬರ್(ಹಿ.ಸ):
ಆ್ಯಂಕರ್ :
‘ಬಿಚ್ಚುಕತ್ತಿ’ ಸಿನಿಮಾ ಮೂಲಕ ಭರವಸೆ ಹುಟ್ಟಿಸಿರುವ ರಾಜವರ್ಧನ್ , ‘ಹಿರಣ್ಯ’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಇದೀಗ ‘ಹಿರಣ್ಯ’ ಸಿನಿಮಾದ ಮಾಸ್ ಟೀಸರ್ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ರಾಜವರ್ಧನ್ ಭರ್ಜರಿ ಆಕ್ಷನ್ ಮಾಡಿದ್ದಾರೆಂಬುದರ ಕುರುಹು ಟೀಸರ್ನಲ್ಲಿದೆ. ಬೆಂಗಳೂರಿನ ವಸಂತನಗರದಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ಹಿರಣ್ಯ’ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಯ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಾಜವರ್ಧನ್, ‘ಹಿರಣ್ಯ’ ಸಿನಿಮಾದ ಕತೆಯನ್ನು ಎರಡು ವರ್ಷದ ಹಿಂದೆ ಪ್ರವೀಣ್ ಹೇಳಿದ್ದರು. ‘ಬಿಚ್ಚುಕತ್ತಿ’ ರೀತಿಯ ದೊಡ್ಡ ಸಿನಿಮಾ ಮಾಡಿದ್ದೆ. ಹಾಗಾಗಿ ಈ ಸಮಯದಲ್ಲಿ ಕಥೆ ಆಯ್ಕೆ ಮಾಡಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಪ್ರವೀಣ್ ಕಥೆ ಹೇಳಿದಾಗ ಒಂದು ಅಂಶ ಬಹಳ ಇಷ್ಟವಾಯ್ತು. ನಿರ್ದೇಶಕ ಪ್ರವೀಣ್ ಕಿರುಚಿತ್ರ ಮಾಡಿ ಸಿನಿಮಾ ನಿರ್ದೇಶನಕ್ಕೆ ಇಳಿದವರು ನೀವು ಈ ಮಟ್ಟಕ್ಕೆ ಬಂದಿದ್ದೀರಾ ಅಂದರೆ ಅದಕ್ಕೆ ಕಾರಣ ನಿರ್ಮಾಪಕರು. ಕಥೆಯನ್ನು ನೀವು ನಂಬಿದ್ದೀರಾ. ನಿರ್ಮಾಪಕರು ನಿಮ್ಮನ್ನು ನಂಬಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಆದಷ್ಟು ಬೇಗ ಸಿನಿಮಾ ತೆರೆಗೆ ಬರಲಿದೆ ಎಂದರು.
ನಿರ್ದೇಶಕ ಪ್ರವೀಣ್ ಅವ್ಯುಕ್ತ ಮಾತನಾಡಿ, ಸಿನಿಮಾದ ಮುಹೂರ್ತದಲ್ಲಿಯೇ ಹೇಳಿದ್ದೆ ಈಗ ಮಾತನಾಡಲ್ಲ ಕೆಲಸ ಮುಗಿಸಿದ ಮೇಲೆ ನಿಮ್ಮ ಮುಂದೆ ಬರುತ್ತೇವೆ ಅಂತ. ಅದರಂತೆ ಕೆಲಸ ಮುಗಿಸಿ ಈಗ ಜನರ ಮುಂದೆ ಬಂದಿದ್ದೇವೆ. ಈ ಸಿನಿಮಾ ಎಲ್ಲರೂ ಒಟ್ಟು ಸೇರಿ ಎಂಜಾಯ್ ಮಾಡಬೇಕಾದಂಥಹಾ ಸಿನಿಮಾ. ರಾಣಾ ಡೆಡ್ಲಿ ಹೆಸರಿನ ಪಾತ್ರದಲ್ಲಿ ರಾಜವರ್ಧನ್ ಮಿಂಚಿದ್ದಾರೆ. ಮೊದಲಿಗೆ ಪಾತ್ರಕ್ಕಾಗಿ ರಾಜವರ್ಧನ್ ಅವರ ಟೆಸ್ಟ್ ಲುಕ್ ಮಾಡಿದೆವು, ನನಗೆ ಬಹಳ ಇಷ್ಟವಾಯ್ತು. ಸಿನಿಮಾದಲ್ಲಿ ಸಹ ಅವರು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಇಡೀ ತಂಡ ನೀಡಿದ ಬೆಂಬಲದಿಂದಾಗಿ ಈ ಚಲನಚಿತ್ರ ತಯಾರಾಗಿದೆ ಎಂದು ಎಲ್ಲರಿಗೂ ಧನ್ಯವಾದ ಹೇಳಿದರು.
ಹಿಂದೂಸ್ತಾನ್ ಸಮಾಚಾರ್
