
ಬಳ್ಳಾರಿ, 1 ಜನವರಿ(ಹಿ.ಸ):
ಆ್ಯಂಕರ್ : ಹೊಸ ವರ್ಷಾಚರಣೆಗಾಗಿ ವಡ್ಡರಬಂಡೆ ಪ್ರದೇಶದಲ್ಲಿರುವ ಬೇಕರಿಯಲ್ಲಿ ಕೇಕ್ ಖರೀದಿ ಮಾಡಿ ಹಿಂದಿರುಗುತ್ತಿದ್ದಾಗ ರಸ್ತೆಗೆ ಅಡ್ಡವಾಗಿ ಮಲಗಿದ್ದ ಯುವಕನನ್ನು ಪಕ್ಕಕ್ಕೆ ಸರಿಸಿದ್ದಕ್ಕಾಗಿ ಉಂಟಾದ ಗಲಭೆಯಲ್ಲಿ ಓರ್ವ ಯುವಕನು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಟೈಲರಿಂಗ್ ಮತ್ತು ಹಮಾಲಿ ಕೆಲಸ ಮಾಡಿಕೊಂಡಿದ್ದ ಗುಂತಕಲ್ಲು ಪ್ರದೇಶದ ನಿವಾಸಿ ಸೈದುಲ್ಲ (23) ಕೊಲೆಯಾದ ಯುವಕ. ಗಾಯಾಳು ಮೃತನ ಸಹೋದರ ರಜಾಕ್ ವಲಿ. ಬಂಧಿತ ಆರೋಪಿ ಶ್ರೀರಾಂಪುರ ಕಾಲೊನಿ ನಿವಾಸಿ ಮುಖೇಶ್ (23). ರಾಜೇಶ್ ಎನ್ನುವ ಯುವಕ ರಸ್ತೆಗೆ ಅಡ್ಡವಾಗಿ ಮಲಗಿದ್ದಾಗ ಪಕ್ಕಕ್ಕೆ ಸರಿಸಿದ್ದೇ ಗಲಭೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ವಡ್ಡರಬಂಡೆಯಲ್ಲಿರುವ ಬೇಕರಿಯಲ್ಲಿ ಕೇಕ್ ಖರೀದಿ ಮಾಡಿ ಹಿಂದಿರುಗುತ್ತಿದ್ದಾಗ ರಾಜೇಶ್ ಎನ್ನುವಾತನು ವಾಹನಕ್ಕೆ ಅಡ್ಡವಾಗಿ ಮಲಗಿದ್ದನು. ರಸ್ತೆಗೆ ಅಡ್ಡವಾಗಿ ಮಲಗಿದ್ದ ರಾಜೇಶ್ನನ್ನು ರಜಾಕ್ ವಲಿ ಪಕ್ಕದಲ್ಲಿ ಮಲಗಿಸಲು ಹೋದಾಗ ರಾಜೇಶ್ ಮತ್ತು ರಜಾಕ್ ವಲಿಗೆ ಮಾತಿನ ಚಕಮಕಿ ನಡೆದಿದೆ.
ಆಗ, ಮುಖೇಶ್ ಸೈದುಲ್ಲ ಮತ್ತು ರಜಾಕ್ವಲಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದ ಕಾರಣ ಸೈದುಲ್ಲಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಾಳು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
