ರಾಂಚಿ, 23 ಫೆಬ್ರವರಿ :
ಆ್ಯಂಕರ್:
ರಾಜ್ಕೋಟ್ ನಲ್ಲಿ ನಡೆದ ಮೂರನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ 434 ರನ್ ಗಳಿಂದ ಗೆದ್ದ ಭಾರತ ಇದೀಗ ಮತ್ತೊಂದು ಮಹತ್ವದ ಪಂದ್ಯಕ್ಕೆ ಸಜ್ಜಾಗಿದೆ. ರಾಂಚಿಯ ಜೆ ಎಸ್ ಸಿಎ ಇಂಟರ್ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ಇಂದು ಇಂಡೋ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಆರಂಭವಾಗಲಿದೆ. ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಮುನ್ನಡೆ ಸಾಧಿಸಿದೆ. ಹೀಗಾಗಿ ಈ ಟೆಸ್ಟ್ ಪಂದ್ಯವನ್ನು ಗೆದ್ದರೆ, ಭಾರತವು ಸರಣಿಯನ್ನು ವಶಪಡಿಸಿಕೊಳ್ಳಲಿದೆ. ರೋಹಿತ್ ಸೇನೆ ಈ ಪಂದ್ಯವನ್ನೂ ಗೆಲ್ಲಲೇಬೇಕೆಂಬ ಹಠದಲ್ಲಿದೆ. ಇದಕ್ಕಾಗಿ ಕಠಿಣ ಅಭ್ಯಾಸ ಕೂಡ ನಡೆಸುತ್ತಿದೆ. ಇದು ಇಂಗ್ಲೆಂಡ್ ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಇಂಗ್ಲೆಂಡ್ಗೆ ಮಾಡು ಇಲ್ಲವೇ ಮಡಿ ಪಂದ್ಯ
ಮೊದಲ ಪಂದ್ಯವನ್ನು ಗೆದ್ದು ಇಂಗ್ಲೆಂಡ್ ತಂಡವು ಭರ್ಜರಿ ಆರಂಭ ಪಡೆದಿತ್ತು. ಆದರೆ ನಂತರ ಟೀಮ್ ಇಂಡಿಯಾ ಬಲಿಷ್ಠವಾಗಿ ಪುನರಾಗಮನ ಮಾಡಿತು. ಸತತ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಸೋತಿದೆ. ಟೀಮ್ ಇಂಡಿಯಾ 0-1 ರಿಂದ 2-1 ಮುನ್ನಡೆ ಸಾಧಿಸಿತು. ಇನ್ನು 4ನೇ ಪಂದ್ಯ ಗೆದ್ದರೆ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಳ್ಳಲಿದೆ. ಆದರೆ ಇಂಗ್ಲೆಂಡ್ ಸರಣಿಯಲ್ಲಿ ತನ್ನ ಸವಾಲನ್ನು ಉಳಿಸಿಕೊಳ್ಳಬೇಕಾದರೆ, ಯಾವುದೇ ಸಂದರ್ಭದಲ್ಲಿ ಕನಿಷ್ಠ ಡ್ರಾ ಅಥವಾ ಪಂದ್ಯವನ್ನು ಗೆಲ್ಲಲೇಬೇಕು. ಹೀಗಾಗಿ ಈ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ಗೆ ದೊಡ್ಡ ಸವಾಲು ಎದುರಾಗಲಿದೆ.
