ಕೋಲಾರ, ೨೧ ಅಕ್ಟೋಬರ್ :
ಆ್ಯಂಕರ್ : ರಾಜ್ಯ ಸರ್ಕಾರಿ ನೌಕರರ ೨೦೨೨-೨೩ನೇ ಸಾಲಿನ ರಾಜ್ಯಮಟ್ಟದ ಕ್ರೀಡಾಕೂಟ ತುಮಕೂರು ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಅ.೨೭ ರಿಂದ ೨೯ ರವರೆಗೂ ನಡೆಯಲಿದ್ದು, ಜಿಲ್ಲೆಯಿಂದ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಅ.೨೪ರ ಮಂಗಳವಾರ ಮಧ್ಯಾಹ್ನ ೧೧-೩೦ ಗಂಟೆಗೆ ನಗರದ ರೋಟರಿ ಭವನದಲ್ಲಿ ಚಹಾಕೂಟ ಹಮ್ಮಿಕೊಳ್ಳಲಾಗಿದ್ದು, ಸಂಘದ ಎಲ್ಲಾ ಪದಾಧಿಕಾರಿಗಳು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಎಲ್ಲಾ ಕ್ರೀಡಾಪಟುಗಳು ಹಾಜರಾಗುವಂತೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಅ.೨೭ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು, ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಹೋಗುವ ಕ್ರೀಡಾಪಟುಗಳನ್ನು ಬೀಳ್ಕೊಡುವ ಮತ್ತು ಅಲ್ಲಿ ಒದಗಿಸಿರುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಲು ಈ ಚಹಾಕೂಟ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯಿಂದ ಪಾಲ್ಗೊಳ್ಳುವ ನೌಕರರು ಪಥ ಸಂಚಲನದಲ್ಲಿ ತಮ್ಮ ಜಿಲ್ಲೆಯ ಬಾವುಟದೊಂದಿಗೆ ಭಾಗವಹಿಸುವುದು ಕಡ್ಡಾಯವಾಗಿದ್ದು, ಅಲ್ಲಿ ಶಿಸ್ತಿನಿಂದ ವರ್ತಿಸಿ, ತೀರ್ಪುಗಾರರ ತೀರ್ಮಾನಕ್ಕೆ ಬದ್ದರಾಗಿರುವ ಮೂಲಕ ಜಿಲ್ಲೆಯ ಘನತೆ ಹೆಚ್ಚಿಸಲು ಸುರೇಶ್ಬಾಬು ಮನವಿ ಮಾಡಿದ್ದಾರೆ.
ತುಮಕೂರು ಜಿಲ್ಲಾ ಯುವಜನ ಕ್ರೀಡಾ ಇಲಾಖೆ ವಸತಿ ಸೌಲಭ್ಯ ಕಲ್ಪಿಸಿದ್ದು, ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮತ್ತವರ ತಂಡದ ನೇತೃತ್ವದಲ್ಲಿ ತುಮಕೂರು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು ಕ್ರೀಡಾಳುಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲಾಮಟ್ಟದಲ್ಲಿ ವಿಜೇತರಾದ ನೌಕರ ಕ್ರೀಡಾಪಟುಗಳು ಈ ಹಿಂದೆ ನೀಡಿದ ಲಿಂಕ್ನಲ್ಲಿ, ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿರುವುದರಿ0ದ ಯುವಜನ ಸೇವಾ ಇಲಾಖೆಯಿಂದ ಯಾವುದೇ ನೀಡುವುದಿಲ್ಲ ಆದರೆ ನೌಕರರು ಕೆಲಸ ಮಾಡುತ್ತಿರುವ ಇಲಾಖೆಯಿಂದಲೇ ಗುರುತಿನ ಚೀಟಿ ತರಲು ಅವರು ಸೂಚಿಸಿದ್ದಾರೆ.
ಸದರಿ ಕ್ರೀಡಾಕೂಟದಲ್ಲಿ ಖಾಯಂ ನೌಕರರು ಮಾತ್ರವೇ ಭಾಗವಹಿಸಲು ಅರ್ಹರಾಗಿದ್ದು, ದಿನಗೂಲಿ, ಅರೆಕಾಲಿಕ, ಕ್ಷೇಮಾಭಿವೃದ್ದಿ, ಗುತ್ತಿಗೆ ನೌಕರರು, ನಿಗಮ ಮಂಡಳಿ ನೌಕರರು ಪಾಲ್ಗೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪೊಲೀಸ್ ಇಲಾಖೆ, ಅರಣ್ಯ ಇಲಾಖೆಗಳಲ್ಲಿ ಸಮವಸ್ತç ವೃಂದಕ್ಕೆ ಪ್ರತ್ಯೇಕ ಕ್ರೀಡಾಕೂಟ ಇರುವುದರಿಂದ ಈ ಎರಡೂ ಇಲಾಖೆಗಳ ಕಚೇರಿ ಹಾಗೂ ಲಿಪಿಕ ನೌಕರರು ಮಾತ್ರ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
