

ಕೊಪ್ಪಳ, 15 ಡಿಸೆಂಬರ್(ಹಿ.ಸ):
ಆ್ಯಂಕರ್: ಕೊಪ್ಪಳ ತಾಲ್ಲೂಕಿನ ಬೆಳಗಟ್ಟಿ ಗ್ರಾಮದ ಆಫ್ರೀನಾ ಬಾನು ನಬೀಸಾಬ ಚಕ್ಕಡಿ ಅವರು ಸ್ಕ್ವಾಯ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದ ಸಾಧನೆ ಮಾಡಿದ್ದು, ಇವರ ಸಾಧನೆಗೆ ಕೊಪ್ಪಳ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡರ್ ಅವರು ಸನ್ಮಾನಿಸಿ ಗೌರವಿಸಿದ್ದಾರೆ.
ಆಫ್ರೀನಾ ಬಾನು ಅವರು ಮುಂಡರಗಿಯ ಮಂಜು ಡೈಮೆಂಡ್ ಮಿಕ್ಸ್ ಮಾರ್ಷಲ್ ಆಟ್ರ್ಸ್ ಅಕಾಡೆಮಿಯ ತರಬೇತುದಾರರಾದ ಮಂಜುನಾಥ ಭಜಂತ್ರಿ ಇವರ ತರಬೇತಿ ಅಡಿಯಲ್ಲಿ ಜಿಲ್ಲಾ/ರಾಜ್ಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ವೈಯಕ್ತಿಕ ಹಾಗೂ ಗುಂಪು ಸ್ಫರ್ಧೆಗಳಲ್ಲಿ ಪ್ರಥಮ/ದ್ವಿತೀಯ ಸಾಧನೆ ಪಡೆದು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಅದರಂತೆ 2022ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಸ್ಕ್ವಾಯ್ ಮಾರ್ಷಲ್ ಆಟ್ರ್ಸ್ನಲ್ಲಿ ಚಿನ್ನದ ಪದಕ, ಹಾಸನ ಜಿಲ್ಲೆಯಲ್ಲಿ ಜರುಗಿದ ರಾಜ್ಯ ಮಟ್ಟದ ಸ್ಕ್ವಾಯ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿರುತ್ತಾರೆ. ಹಾಗೇ 2022ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜರುಗಿದ 18ವರ್ಷ ಮೇಲ್ಪಟ್ಟವರ 23ನೇ ಸ್ಕ್ವಾಯ್ ನ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ರಾಷ್ಟ್ರ ಮಟ್ಟದ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು 02 ಚಿನ್ನದ ಪದಕ ಪಡೆದುಕೊಂಡಿರುತ್ತಾರೆ.
2023ರ ಫೆಬ್ರವರಿಯಲ್ಲಿ ನೇಪಾಳದಲ್ಲಿ ಜರುಗಿದ ಸ್ಕ್ವಾಯ್ ಸೌತ್ ಏಷಿಯನ್ ಚಾಂಪಿಯನ್ಶಿಪ್ನ ಗುಂಪು ಸ್ಪರ್ಧೆಯಲ್ಲಿ ಕೂಡ ಚಿನ್ನದ ಪದಕ ಪಡೆದುಕೊಂಡಿರುತ್ತಾರೆ. ಹರಿಯಾಣದ ಛತ್ತೀಸ್ಗಡ್ನಲ್ಲಿ ಜರುಗಿದ ಕೇಂದ್ರ ಸರ್ಕಾರದ ಏಕ್ ಭಾರತ್ ಶ್ರೇಷ್ಠ ಭಾರತ್ (ವಿಭಾಗ-1) ಅಡಿ ಚಿನ್ನದ ಪದಕ ಪಡೆದುಕೊಂಡಿರುತ್ತಾರೆ ಮತ್ತು ಗೋವಾದಲ್ಲಿ ನಡೆದ 37ನೇ ನ್ಯಾಷನಲ್ ಗೇಮ್ನಲ್ಲಿ ಸ್ಕ್ವಾಯ್ ಕ್ರೀಡೆಯ ಗ್ರೂಪ್ ಏರೋದಲ್ಲಿ ಬೆಳ್ಳಿ ಪದಕ ಮತ್ತು ವೈಯಕ್ತಿಕ ಏರೋದಲ್ಲಿ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಇವರ ಸಾಧನೆಗೆ ಮುಂಬರುವ ದಿನಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಇನ್ನೂ ಹೆಚ್ಚಿನ ಕ್ರೀಡಾ ಸಾಧನೆಗೆ ಸಂಪೂರ್ಣ ಬೆಂಬಲವನ್ನು ಮತ್ತು ಕ್ರೀಡಾಪಟುವಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಶುಭ ಕೋರಿದರು.
