
ಕೊಪ್ಪಳ, 5 ಡಿಸೆಂಬರ್(ಹಿ.ಸ):
ಆ್ಯಂಕರ್: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಸಂಬಂಧ ಜಿಲ್ಲೆಯ ವಿವಿಧ ಕ್ರೀಡೆಯ ಕ್ರೀಡಾ ಪಟುಗಳ 2022-23ನೇ ಕ್ಯಾಲೆಂಡರ್ ವರ್ಷದಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ಪಡೆದು ಕ್ರೀಡಾ ಸಾಧನೆ ಮಾಡಿದ ಕೊಪ್ಪಳ ಜಿಲ್ಲೆಯ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರೋತ್ಸಾಹ ಧನವನ್ನು ಕೊಪ್ಪಳ ಜಿಲ್ಲೆಯ ಕ್ರೀಡಾ ಪಟುಗಳಿಗೆ ಮಾತ್ರ ನೀಡಲಾಗುತ್ತಿದ್ದು, ಕ್ರೀಡಾಪಟುಗಳು ಅಂತರಾಷ್ಟ್ರೀಯ/ರಾಷ್ಟ್ರೀಯ/ರಾಜ್ಯ ಮಟ್ಟದ ತಂಡಗಳನ್ನು ಪ್ರತಿನಿಧಿಸಿ ಸರ್ಕಾರದಿಂದ ಅಂಗೀಕೃತವಾದಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾಗಿರಬೇಕು. ಕರ್ನಾಟಕದ ಮೂಲದವರಾಗಿದ್ದು, ಬೇರೆ ರಾಜ್ಯ ಅಥವಾ ಕ್ರೀಡಾತಂಡವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಅರ್ಹರಾಗಿರುವುದಿಲ್ಲ. ಕ್ರೀಡಾಪಟುಗಳು ಆಧಾರ್ ಕಾರ್ಡ, ಪಡಿತರ ಚೀಟಿ ಪ್ರತಿಯನ್ನು ಸಲ್ಲಿಸಬೇಕು.
ಒಲಂಪಿಕ್/ಏಷ್ಯನ್/ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಅಂತರರಾಷ್ಟ್ರೀಯ ಸಂಸ್ಥೆ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯದಿಂದ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳು ನಡೆಸುವ ಅಧಿಕೃತ ಚಾಂಪಿಯನ್ಶಿಪ್ಗಳಿಗೆ ಮಾತ್ರ ಪ್ರೋತ್ಸಾಹಧನ ನೀಡಲಾಗುವುದು. (ಮಾನ್ಯತೆ ಪಡೆಯದೇ ಇರುವ ಯಾವುದೇ ಫೆಡರೇಷನ್ ನಡೆಸುವ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಪ್ರೋತ್ಸಾಹಧನಕ್ಕೆ ಅರ್ಹರಾಗಿರುವುದಿಲ್ಲ.) ಬ್ಯಾಂಕ್ ಖಾತೆ ಕಡ್ಡಾಯವಾಗಿ ಕ್ರೀಡಾಪಟುವಿನ ಹೆಸರಿನಲ್ಲಿರುವ ಬಗ್ಗೆ ಜರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
