
ಬಳ್ಳಾರಿ, 30 ಅಕ್ಟೋಬರ್ (ಹಿ.ಸ):
ಆ್ಯಂಕರ್ : ಬಂಧನಗಳಿಂದ ಕೂಡಿದ್ದ ವರ್ಣ ವ್ಯವಸ್ಥೆಯಲ್ಲಿ ಬಸವಣ್ಣನವರು ಸಮಾಜದಲ್ಲಿಯ ಪಿಡುಗುಗಳನ್ನು – ಬಂಧನಗಳನ್ನು ಮುಕ್ತಗೊಳಿಸಲು ಅವತರಿಸಿದ ಮಹಾತ್ಮರು ಎಂದು ಶಿಕ್ಷಕಿ ಈರಮ್ಮ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ 294ನೇ ಮಹಾಮನೆ ಲಿಂ. ಫಕೀರಪ್ಪ ತೋಟಪ್ಪ ಗಡ್ಡಿ ದತ್ತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಸವಣ್ಣನವರು ಬದುಕಿನ ಸರ್ವತೋಮುಖ ಅಭಿವೃದ್ಧಿಗಾಗಿ, ಬಂಧಮುಕ್ತವಾದ – ಕಟ್ಟಳೆಗಳು ಇಲ್ಲದ ಸಮ ಸಮಾಜದ ನಿರ್ಮಾಣಕ್ಕಾಗಿ ಫಣತೊಟ್ಟು ಕ್ರಾಂತಿಕಾರಿ ಚಿಂತನೆಗಳ ಮೂಲಕ ಸಮಾಜದ ಸಂಘಟನೆ ಮಾಡುತ್ತಿದರು. ನಿಜಾರ್ಥದಲ್ಲಿ ಬಸವಣ್ಣನವರು ಅನೇಕ ಬಂಧನಗಳಿಂದ ಮಾನವೀಯತೆಯನ್ನು ಮುಕ್ತಗೊಳಿಸಿದ್ದರು ಎಂದರು.
ದತ್ತಿ ದಾಸೋಹಿ, ನರರೋಗ ತಜ್ಞ ಡಾ. ಸೋಮೇಶ್ವರ ಎಫ್. ಗಡ್ಡಿ ಅವರು ಉಪನ್ಯಾಸ ಉದ್ಘಾಟಿಸಿ, ವಿದ್ಯಾರ್ಥಿಗಳು ಸದಾ ಕ್ರಿಯಾಶೀಲತೆಯನ್ನು ಕಾಪಾಡಿಕೊಳ್ಳುವ ಮೂಲಕ ಕಲಿಕೆಯಲ್ಲಿ ಪ್ರಗತಿ, ಸಾಧನೆಯಲ್ಲಿ ಅಭಿವೃದ್ಧಿ ಸಾಧಿಸುವ ಮೂಲಕ ಗುರಿಯನ್ನು ತಲುಪುವಲ್ಲಿ ಯಶಸ್ಸನ್ನು ಸಾಧಿಸಬಹುದಾಗಿದೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ಧರಾಮಯ್ಯ ಕಲ್ಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಬಸವಣ್ಣನವರು ಜೀವಿತಾವಧಿಯ ಅಲ್ಪಾವಧಿಯಲ್ಲಿಯೇ ಆಜೀವ ಸಾಧನೆಯನ್ನು ಮಾಡಿ `ಯುಗ ಪುರುಷ’ರಾದರು ಎಂದರು.
ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಎಂ.ಗಿರಿಜಾ ಮತ್ತು ಶ್ರೀಮತಿ ಪಿ.ಕಟ್ಟೆಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರಿಯಾಂಕಾ ಹಾಗೂ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಫರೀದಾ ಬೇಗಂ ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ದಾಸೋಹಿಗಳನ್ನು ಪರಿಚಯಿಸಿ, ವಂದನಾರ್ಪಣೆ ಸಲ್ಲಿಸಿದರು. ನಂದಿನಿ ಕಾರ್ಯಕ್ರಮ ನಿರೂಪಿಸಿದರು.
