
ನವದೆಹಲಿ,31ಅಕ್ಟೋಬರ್ (ಹಿ.ಸ):
ಆ್ಯಂಕರ್ :ಕೇರಳದ ಕೊಚ್ಚಿಯ ಕಲಮಶ್ಶೇರಿಯಲ್ಲಿ ನಿನ್ನೆ ಸಂಭವಿಸಿದ ಸರಣಿ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ ೩ಕ್ಕೆ ಏರಿಕೆ ಆಗಿದೆ. ಘಟನೆಯಲ್ಲಿ ಒಟ್ಟು ೫೨ ಮಂದಿ ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕಲ್ಪಿಸಲಾಗುತ್ತಿದೆ. ಈ ನಡುವೆ ಸ್ಪೋಟದಿಂದ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ೧೨ ವರ್ಷದ ಲಿಬಿನಾ ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಶೇಕಡ ೯೫ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಲಿಬಿನಾಗೆ ಕಲಮಸ್ಸೇರಿ ವೈದ್ಯಕೀಯ ಕಾಲೇಜಿನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಘಟನೆ ಸಂಭವಿಸಿದ ತಕ್ಷಣ ಬಾಲಕಿಯನ್ನು ಇಲ್ಲಿನ ವೈದ್ಯಕೀಯ ಕಾಲೇಜಿಗೆ ಕರೆತರಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮಧ್ಯ ರಾತ್ರಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನಿನ್ನೆ ಲಿಯೋನಾ ಎಂಬ ಮಹಿಳೆ ಸ್ಪೋಟ ನಡೆದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ತೊಡಪುಳ ನಿವಾಸಿ ಮೀನಾ ಕುಮಾರಿ ಎಂಬವರು ನಿನ್ನೆ ಸಂಜೆ ಕಲಮಶ್ಶೇರಿಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಮೂಲಕ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ. ಘಟನೆಯಲ್ಲಿ ಒಟ್ಟು ೫೨ ಮಂದಿ ಗಾಯಗೊಂಡಿದ್ದು, ೧೬ ಜನರ ಸ್ಥಿತಿ ಗಂಭೀರವಾಗಿದೆ. ಇದರಲ್ಲಿ ೮ ಮಂದಿ ಕಲಮಶ್ಶೇರಿ ವೈದ್ಯಕೀಯ ಕಾಲೇಜಿನಲ್ಲಿ, ಇಬ್ಬರು ಸನ್ರೈಸ್ ಆಸ್ಪತ್ರೆಯಲ್ಲಿ, ೪ ಮಂದಿ ರಾಜಗಿರಿ ಆಸ್ಪತ್ರೆಯಲ್ಲಿ ಹಾಗೂ ಇಬ್ಬರು ಮೆಡಿಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ, ಸ್ಪೋಟ ನಡೆಸಿದ ಶಂಕಿತ ಡೊಮಿನಿಕ್ ಮಾರ್ಟಿನ್ನನ್ನು ಪೊಲೀಸರು ಕಣ್ಣೂರು ರೈಲ್ವೇ ನಿಲ್ದಾಣದಲ್ಲಿ ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆರೋಪಿ ಮಾರ್ಟಿನ್, ಈ ಸ್ಪೋಟವನ್ನು ತಾನೇ ಮಾಡಿದ್ದು, ಇದರಲ್ಲಿ ಬೇರೆ ಯಾರದ್ದೇ ಕೈವಾಡ ಇಲ್ಲ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
