

ರಾಯಚೂರು, 26 ಫೆಬ್ರವರಿ :
ಆ್ಯಂಕರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಫೆ.26ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೊಲೀಯೋ ದಿನಾಚರಣೆ ಕುರಿತು ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಹಾಗೂ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಮಾತನಾಡಿ, ಜಿಲ್ಲೆಯಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೊಲೀಯೋ ಲಸಿಕೆಯನ್ನು ನೀಡಬೇಕು ಎಂದರು.
ಮಾ.3 ರಿಂದ 6 ರವರೆಗೆ ಜರಗುವ ಲಸಿಕೆ ಕಾರ್ಯಕ್ರಮದಲ್ಲಿ ಮೊದಲನೆ ದಿನ ಬೂತ್ ಕವರೇಜ 98% ಕಡ್ಡಾಯವಾಗಿ ಎಲ್ಲಾ ಮಕ್ಕಳಿಗೆ ಲಸಿಕೆ ಕೊಡಿಸುವುದರ, ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಗುಡ್ಡಗಾಡು ಪ್ರದೇಶ, ತಾಂಡಾ ಮತ್ತು ದೊಡ್ಡಿಗಳಲ್ಲಿ ಮಾ.1 ಮತ್ತು 2 ರಂದು ಮುಂಚಿತವಾಗಿ ಮಕ್ಕಳಿಗೆ ಲಸಿಕೆ ನೀಡಬೇಕು ಹಾಗೂ ಶಾಲಾ ಮಕ್ಕಳಿಂದ ಜಾಥಾ ಮಾಡಿಸಿ ವ್ಯಾಪಕ ಪ್ರಚಾರ ಮಾಡಬೇಕು ಮತ್ತು ಜೆಸ್ಕಾಂ ಇಲಾಖೆಯವರು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಮುಗಿಯುವರೆಗೂ ವಿದ್ಯೂತ್ ಸರಬರಾಜು ಮಾಡಬೇಕು ಹಾಗೂ ಆರ್.ಟಿ.ಓ ಇಲಾಖೆಯವರು ವಾಹನದ ವ್ಯವಸ್ಥೆ ಮಾಡಬೇಕೆಂದು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 2,55,257 5 ವರ್ಷದೊಳಗಿನ ಮಕ್ಕಳಿದ್ದು, ಗ್ರಾಮೀಣ ಭಾಗದಲ್ಲಿ 1,90,658 ಮಕ್ಕಳಿದ್ದಾರೆ. ಉಳಿದಂತೆ ನಗರ ಪ್ರದೇಶದಲ್ಲಿ 64,599 ಮಕ್ಕಳಿದ್ದು, ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೊಲೀಯೋ ಲಸಿಕೆಯನ್ನು ನೀಡುವಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾಯ್ನಿರ್ವಹಿಸಬೇಕು ಎಂದರು.
ಇದೇ ವೇಳೆ ರಾಷ್ಟ್ರೀಯ ಪಲ್ಸ್ ಪೊಲೀಯೋ ದಿನಾಚರಣೆ ಅಂಗವಾಗಿ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ಸವೇಕ್ಷಣಾಧಕಾರಿ ಡಾ.ಕೆ.ಗಣೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚೇತನಕುಮಾರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಕುಮಾರ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಂದಿತಾ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಮಹ್ಮದ್ ಶಾಕೀರ್ ಮೊಹಿನುದ್ದಿನ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಪ್ರಜ್ವಲ್ ಕುಮಾರ, ಡಾ.ಅಯ್ಯನಗೌಡ, ಡಾ.ಶರಣಬಸವರಾಜ, ಡಾ.ಬನದೇಶ್ವರ, ಡಾ.ರವಿಕಿರಣ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
