ಬಳ್ಳಾರಿ, 12 ಫೆಬ್ರವರಿ :
ಆ್ಯಂಕರ್: ಹನ್ನೆರಡನೆಯ ಶತಮಾನದಲ್ಲಿನ ಶಿವಶರಣರು, ಯಾವುದೇ ಕಾಯಕ ಮೇಲಲ್ಲ ಮತ್ತು ಕೀಳಲ್ಲ ಎಂಬ ಮನೋಧೋರಣೆಯ ಮೂಲಕ ದೇವರನ್ನು ಒಲಿಸಿಕೊಂಡವರು ಶರಣರು ಎಂದು ಮಹಾನಗರ ಪಾಲಿಕೆಯ ಮೇಯರ್ ಬಿ. ಶ್ವೇತ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣ ಸಭಾಂಗಣದಲ್ಲಿ ನಡೆದವ ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ, ಉರಿಲಿಂಗ ಪೆದ್ದಿ ಅವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಶರಣರು ಇದ್ದರು. ಅವರಲ್ಲಿ ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಉರಿಲಿಂಗಿಪೆದ್ದಿ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ ಅವರು ಹಿರಿಯ ಶರಣರಾಗಿದ್ದರು. ಈ ಶರಣರ ಜೀವನ ಹಾಗೂ ಮೌಲ್ಯಗಳನ್ನು ಸಮಾಜಕ್ಕೆ ಬಿತ್ತರಿಸುವ ನಿಟ್ಟಿನಲ್ಲಿ ಸರ್ಕಾರ ಜಯಂತಿ ಆಚರಣೆ ಮಾಡುತ್ತಿದೆ ಎಂದರು.
ವಿಶೇಷ ಉಪನ್ಯಾಸಕರಾಗಿದ್ದ ಸಾಹಿತಿ ಎನ್.ಡಿ. ವೆಂಕಮ್ಮ ಅವರು, ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಇರುವ ಕಂದಾಚಾರ, ಜಾತಿ ಪದ್ಧತಿಗಳನ್ನು ಹೋಗಲಾಡಿಸುತ್ತಿದ್ದರು. ಸಮ ಸಮಾಜ ನಿರ್ಮಾಣಕ್ಕಾಗಿ ಶರಣರ ವಚನಗಳನ್ನು ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ವಿಶೇಷ ಉಪನ್ಯಾಸಕಿ ಸುಶೀಲ ಶಿರೂರ್ ಅವರು, ಶರಣರು ಸಮಾಜದಲ್ಲಿದ್ದ ಅಂಕುಡೊಂಕುಗಳ ಕುರಿತು ಸರಳ ಭಾಷೆಯ ಮೂಲಕ ಸಾಮಾನ್ಯ ಜನರಿಗೆ ತಿಳಿಸುವ ಕಾರ್ಯ ಮಾಡಿದರು. ವಿದ್ಯಾರ್ಥಿಗಳು ಶರಣರ ವಚನಗಳನ್ನು ಅಧ್ಯಯನ ಮಾಡಬೇಕು. ಆಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದರು.
ಬಳ್ಳಾರಿಯ ಎರ್ರೆಗೌಡ ಕೆ.ಆರ್ ಅವರ ಸಂಗಡಿಗರಿಂದ ಶರಣರ ವಚನ ಗಾಯನಗಳನ್ನು ಪ್ರಸ್ತುತ ಪಡಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಇತರರು ಉಪಸ್ಥಿತರಿದ್ದರು.
