ಬೆಂಗಳೂರಿಗೂ ಬೆಂಕಿಗೂ ಒಂಥರಾ ಅವಿನಾನುಭವ ಸಂಬಂಧವೇನೋ? ಒಂದು ಕಡೆ ಮುಗೀತಿದ್ದಂತೆ ಮತ್ತೊಂದು ಕಡೆ ಬೆಂಕಿ ಅನಾಹುತ ಸಂಭವಿಸ್ತಿದೆ. ಇದೀಗ ಚಿಕ್ಕಪೇಟೆಯಲ್ಲಿ ಮತ್ತೆ ಅಗ್ನಿದೇವ ಪ್ರತ್ಯಕ್ಷನಾಗಿದ್ದ. ಕತ್ತಲ ಹೊತ್ತಲ್ಲಿ ಜ್ವಾಲೆಯಾಗಿ ಕಾಣಿಸಿಕೊಂಡಿದ್ದ.
ಕಗ್ಗತ್ತಲಲ್ಲಿ ಬೆಂಕಿಯ ಜ್ವಾಲೆಯಾಗಿ ಉರೀತಿದೆ. ಕಟ್ಟಡಕ್ಕೆ ಕಟ್ಟಡವೇ ಬೆಂಕಿಯಲ್ಲಿ ಬೆಂದು ಹೋಗಿದೆ. ಇದು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿರೋ ಅಗ್ನಿ ಅವಘಡ.
ಚಿಕ್ಕಪೇಟೆಯ ಅಭಿನಯ ಥಿಯೇಟರ್ ಬಳಿ ಇರುವ ಕಟ್ಟಡದ ಎರಡು ಮತ್ತು ಮೂರನೇ ಅಂತಸ್ತಿ ನಲ್ಲಿ ರಾತ್ರಿ ಕಾಣಿಸಿಕೊಂಡಿದ್ದ ಬೆಂಕಿ ಇಡೀ ಕಟ್ಟಡವನ್ನ ಧಗಧಗಿಸುವಂತೆ ಮಾಡಿತ್ತು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಭು ಎಂಬುವವರಿಗೆ ಸೇರಿದ ಲೇಸರ್ ಕಟ್ಟಿಂಗ್ ಶಾಪ್ ಹಾಗೂ ಎಲೆಕ್ಟ್ರಿಕ್ ಶೋರೂಂನಲ್ಲಿ ಅಗ್ನಿ ವ್ಯಾಪಿಸಿತ್ತು. ಘಟನಾ ಸಂದರ್ಭದಲ್ಲಿ ಮೂವರು ಕಾರ್ಮಿಕರು ಲೇಸರ್ ಕಟ್ಟಿಂಗ್ ಕೆಲಸ ಮಾಡ್ತಿದ್ರಂತೆ. ಕೂಡಲೇ ಕಟ್ಟಡದಿಂದ ಕಾರ್ಮಿಕರೆಲ್ಲ ಕೆಳಗೆ ಓಡಿ ಬಂದಿದ್ದಾರೆ. ಹೀಗಾಗಿ ಯಾವುದೇ ಅವಘಡ ಸಂಭವಿಸಿಲ್ಲ. ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಕ್ಷಣ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾದ್ರು.
ಚಿಕ್ಕಪೇಟೆ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಅಕ್ರಮವಾಗಿ ಲೇಸರ್ ಕಟ್ಟಿಂಗ್ ಶಾಪ್ ನಡೆಸ್ತಿದ್ರಂತೆ. ಜನನಿಬಿಡ ಪ್ರದೇಶದಲ್ಲಿ ಅನುಮತಿ ಇಲ್ಲದೇ, ಕೈಗಾರಿಕಾ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಬೇಕಾದ ಲೇಸರ್ ಕಟ್ಟಿಂಗ್ ಶಾಪ್ ಅಕ್ರಮವಾಗಿ ಕಾರ್ಯನಿರ್ವಹಿಸ್ತಿದೆ. ಲೇಸರ್ ಕಟ್ಟಿಂಗ್ ಶಾಪ್ನಿಂದ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಳ್ತಿಲ್ಲ ಅಂತಾ ಸ್ಥಳೀಯರು ಆರೋಪಿಸ್ತಿದ್ದಾರೆ.
ಒಟ್ಟಾರೆ, ಮತ್ತೊಂದು ಬೆಂಕಿ ಅವಘಡಕ್ಕೆ ರಾಜಧಾನಿ ಸಾಕ್ಷಿಯಾಗಿದೆ. ಸ್ಥಳಕ್ಕೆ ಸರಿಯಾದ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ರಿಂದ ಹೆಚ್ಚೇನೂ ಅಪಾಯ ಆಗಿಲ್ಲ.
