ಹಾಸನ, 1 ನವೆಂಬರ್ (ಹಿ.ಸ):
ಆ್ಯಂಕರ್ :
ನಾಳೆಯಿಂದ ನ.15ರವರೆಗೆ ನಡೆಯುವ ಹಾಸನಾಂಬ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ದೇವಸ್ಥಾನದ ಸುತ್ತಮುತ್ತ ಬ್ಯಾರಿಕೇಡ್ ನಿರ್ಮಾಣ ವಿದ್ಯುತ್ ಅಲಂಕಾರ , ಹೂವಿನ ಅಲಂಕಾರ ಸೇರಿದಂತೆ ಭಕ್ತರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ತಯಾರಿಗಳು ಮುಕ್ತಾಯದ ಹಂತದಲ್ಲಿ ಇದೆ.
ದೇವಸ್ಥಾನದ ಸುತ್ತಮುತ್ತ ಸೇರಿದಂತೆ ನಗರಸಭೆ ಎದುರು ರಸ್ತೆಯಿಂದ ದೇವಾಲಯದವರೆಗೆ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು ಹಾಗೂ ನೆಲಹಾಸು (ಮ್ಯಾಟ)ನ್ನು ಹಾಕಲಾಗಿದ್ದು ಅಲ್ಲಲ್ಲಿ ಫ್ಯಾನ್ ವ್ಯವಸ್ಥೆಯನ್ನು ಸಹ ಈ ಬಾರಿ ವಿಶೇಷವಾಗಿ ಮಾಡಲಾಗಿದೆ.
ಬ್ರಾಹ್ಮಣರ ಬೀದಿ ಸೇರಿದಂತೆ ಸಂತೆಪೇಟೆಯಿಂದ ಬರುವ ರಸ್ತೆ ಪಕ್ಕದಲ್ಲಿಯೂ ಬ್ಯಾರಿಕೆಡ್ ನಿರ್ಮಾಣ ಮಾಡಲಾಗಿದ್ದು ಇಲ್ಲಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಪ್ರವೇಶ ಕಲ್ಪಿಸಲಾಗುತ್ತಿದೆ. ದೇವಾಲಯದ ಗೋಪುರದ ಬಲ ಭಾಗದಲ್ಲಿ ಒಂದು ಸಾವಿರದ ಟಿಕೆಟ್ ಹಾಗೂ ವಿವಿಐಪಿ ಪಾಸ್ ಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದ್ದು ಇಲ್ಲಿಯೇ ಟಿಕೆಟ್ ಕೌಂಟರ್ ಗಳನ್ನುತೆರೆಯಲಾಗಿದೆ.
ದೇವಾಲಯದ ಬಲಭಾಗದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಬ್ಯಾರಿಕೆಡ್ ನಿರ್ಮಾಣ ಮಾಡಲಾಗಿದ್ದು ಜರ್ಮನ್ ಟೆಂಟ್ ಅನ್ನು ಸಹ ಹಾಕಲಾಗಿದೆ. ವೃದ್ಧರಿಗೆ ಪ್ರತ್ಯೇಕ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದು ಈ ಬಾರಿಯ ವಿಶೇಷವಾಗಿದೆ.
ನಗರಸಭೆ ಎದುರಿನ ಪ್ರವೇಶ ದ್ವಾರದಿಂದ ಅಂಗವಿಕಲರಿಗೆ ದರ್ಶನಕ್ಕೆ ಆಗಮಿಸಲು ವೀಲ್ಚೇರಿಗಳ ವ್ಯವಸ್ಥೆಯನ್ನು ಮಾಡಲಾಗಿದ್ದು ಪ್ರಮುಖ ಪ್ರವೇಶ ದ್ವಾರ ಹಾಗೂ ಇತರೆಡೇ ಪೊಲೀಸ್ ಹಾಗೂ ಹೋಂ ಗಾಡ್ರ್ಸ್ಗಳನ್ನು ನಿಯೋಜನೆ ಮಾಡಿ ಸುಲಲಿತ ಹಾಗೂ ತಡೆರಹಿತ ಭಕ್ತರ ಸಾಲು ಸಾಗಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್
