
ಬಳ್ಳಾರಿ, 18 ನವೆಂಬರ್ (ಹಿ.ಸ.) :
ಆ್ಯಂಕರ್ : ಮನುಷ್ಯನ ಮನಸ್ಸು ಏತಕ್ಕಾಗಿ ನಿರಂತರ ವಿಚಲಿತಗೊಳ್ಳುತ್ತಿದೆ ಎನ್ನುವದೇ ಚಿಂತನಾರ್ಹ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಟ್ಟೂರುಸ್ವಾಮಿ ಮಠದಲ್ಲಿ ಸೋಮವಾರ ನಡೆದ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಮತ್ತು ಶಿವಾನುಭವದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರ ಮನಸ್ಸು ತೀವ್ರವಾಗಿ ಚಂಚಲಗೊಳ್ಳುತ್ತಿದೆ. ಮನಸ್ಸಿನ ನಿರಂತರ ಚಂಚಲತೆಯ ಕುರಿತು ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ. ಮಹಾ ಶಿವಭಕ್ತ, ತಪಸ್ವಿ, ಶಿವನ ಆತ್ಮಲಿಂಗವನ್ನೇ ಪಡೆದಿದ್ದ ರಾವಣನು ಒಂದು ಕ್ಷಣದ ಮನಸ್ಸಿನ ಚಂಚಲತೆಯ ಕಾರಣ ತನ್ನೆಲ್ಲಾ ಸಾಮಥ್ರ್ಯವನ್ನು, ಶಕ್ತಿಯನ್ನು ಹಾಗೂ ತಪಸ್ಸಿನ ಪ್ರಭಾವವನ್ನು ಕಳೆದುಕೊಂಡು ವಿಭಿನ್ನವಾಗಿ ಗುರುತಿಸಿಕೊಳ್ಳಬೇಕಾಯಿತು. ಕಾರಣ ಪ್ರತಿಯೊಬ್ಬರೂ ಮನಸ್ಸಿನ ಆಸೆ – ಆಮಿಷಗಳಿಗೆ ಬಲಿಯಾಗದೇ ಏಕಾಗ್ರತೆಯನ್ನು ಸಾಧಿಸಲು ನಿರಂತರ ಪ್ರಯತ್ನಿಸಬೇಕು ಎಂದರು.
ಕಾಲ ಮತ್ತು ಕರ್ಮ ಯಾರನ್ನೂ ಬಿಡುವುದಿಲ್ಲ. ಕಾಲದ ಪ್ರಭಾವಕ್ಕೆ ಪ್ರತಿಯೊಬ್ಬರೂ ಒಳಗಾಗಿದ್ದು, ಕರ್ಮದ ಪ್ರೇರಣೆಗೆ ಪ್ರತಿಯೊಬ್ಬರೂ ಸಿಲುಕಿದ್ದೇವೆ. ಪ್ರತಿಯೊಬ್ಬರೂ ಕಾಲ ಮತ್ತು ಕರ್ಮದ ವ್ಯಾಪ್ತಿಯಲ್ಲಿಯೇ ದಿನಗಳನ್ನು ಕಳೆಯಬೇಕಿದೆ. ನಮ್ಮೆಲ್ಲರ ಬದುಕು ಸಂತೋಷವಾಗಿಡಲು ನಾವು ಕಾಲದ ಜೊತೆಯಲ್ಲಿ ಸದ್ವಿಚಾರ, ಸಚ್ಯಾರಿತ್ರ್ಯ, ಸೇವೆ, ಮಾನವೀಯ ನೆರವುಗಳನ್ನು ಕೈಗೊಳ್ಳುವಲ್ಲಿ ಸದಾಕಾಲ ನಿರತರಾಗಬೇಕು ಎಂದರು.
ಶಿಕ್ಷಕಿ ಡಾ. ಕಲ್ಯಾಣಿ ವೈ. ಅವರು, ಅಕ್ಕಮಹಾದೇವಿಯ ವಚನಗಳಲ್ಲಿ ಸಾಮಾಜಿಕ ಚಿಂತನೆ’ ವಿಷಯದ ಉಪನ್ಯಾಸ ನೀಡಿ, ಅನುಭವಮಂಟಪದ ಮೂಲಕ ಸಮಾಜದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ ಸಾದ್ವಿ ಅಕ್ಕಮಹಾದೇವಿ ಅವರು, ವಚನಗಳ ಮೂಲಕ ಸಮಾಜಕ್ಕೆ ದಾರಿದೀಪವಾದರು. ಅಕ್ಕನವರ ವಚನಗಳಲ್ಲಿ ಮಹಿಳಾ ಸ್ವಾತಂತ್ರ್ಯ, ಲಿಂಗಸಮಾನತೆ, ಮಹಿಳಾ ಸಾಮಾಜಿಕ ಭದ್ರತೆ, ಮಹಿಳಾ ಸ್ಥಿತಿಗತಿಗಳನ್ನು ವಿವರಿಸಿದ್ದರು ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ನಿವೃತ್ತ ಅಧಿಕಾರಿ ಶ್ರೀಮತಿ ಜಂಗಮ ಸುವರ್ಣ, ಹಿರಿಯ ವಕೀಲರಾದ ಅಯ್ಯಪ್ಪ, ದಾನಿಗಳಾದ ಸಂಗನಕಲ್ಲು ಚನ್ನನಗೌಡ ದಂಪತಿಗಳು, ಶ್ರೀಧರಗಡ್ಡೆ ಮತ್ತು ಸೋಮಸಮುದ್ರ ಅಕ್ಕನಬಳಗದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಗುರು ಪುಟ್ಟರಾಜ ಗವಾಯಿಗಳ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಬಳ್ಳಾರಿಯ ಅಕ್ಕನ ಬಳಗದ ಶ್ರೀಮತಿ ಸುಶೀಲ ಶಿರೂರ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವನಜಾಕ್ಷಿ ಅವರು ವಂದನಾರ್ಪಣೆ ಸಲ್ಲಿಸಿದರು.
ಗದಗ ಜಿಲ್ಲೆಯ ನರೆಗಲ್ಲುನ ಎಸ್‍ಎವಿವಿಪಿ ಕಿವುಡ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ `ಕಡ್ಲಿಮಟ್ಟಿ ಕಾಶೀಬಾಯಿ’ ಜನಪದ ನಾಟಕವು ಪ್ರೇಕ್ಷಕರ ಮನಸೂರೆಗೊಂಡಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್
