ಹಾವೇರಿ, 06 ನವೆಂಬರ್ (ಹಿ.ಸ):
ಆ್ಯಂಕರ್: ರಾಜ್ಯದಲ್ಲಿ 1.8 ಕೋಟಿ ಅಸಂಘಟಿತ ಕಾರ್ಮಿಕರಿದ್ದು ಅಂತಹ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಮೂಲಸೌಕರ್ಯ ನೀಡುವುದರ ಮೂಲಕ ಅವರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವೇ ನೇರವಾಗಿ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿರುವ ನಗರ ವಾಸಿಗಳು ಹಾಗೂ ನೌಕರರ ಸಂಘಟನೆಯ ಜೊತೆಗೆ ಮಾತನಾಡಿ ಅವರ, ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಹೊಸ ಯೋಜನೆಗಳನ್ನು ರೂಪಿಸಲು ಅನುಕೂಲವಾಗುವಂತೆ ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ ಎಂದರು.
ಬೇರೆ ಬೇರೆ ಸೌಲಭ್ಯಗಳ ಅಡಿಯಲ್ಲಿ ಹೊಸ 13 ಲಕ್ಷ ಅರ್ಜಿಗಳು ಬಂದಿದ್ದು, ಅದರಲ್ಲಿ 6 ಲಕ್ಷ ಅರ್ಜಿಗಳು ವಿವಿಧ ಸೇವೆಗಳ ಸೌಲಭ್ಯ ಪಡೆಯಲು ಬಂದಿವೆ. 7 ಲಕ್ಷ ಅರ್ಜಿಗಳು ವಿದ್ಯಾರ್ಥಿ ವೇತನದ ಅರ್ಜಿಗಳಾಗಿವೆ. ಇವೆಲ್ಲ ಅರ್ಜಿಗಳನ್ನು ಕೂಲಂಕಶವಾಗಿ ಪರಿಶೀಲನೆ ಮಾಡಿ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ಸರ್ಕಾರ ಜಾರಿಗೆ ತಂದಿರುವ ಐದು ಮಹತ್ತರ ಗ್ಯಾರಂಟಿ ಯೋಜನೆಗಳಿಂದ ಇಲಾಖೆಯ ಆರ್ಥಿಕತೆಗೆ ಯಾವುದೇ ಸಮಸ್ಯೆಯಾಗಿಲ್ಲ. ಸರ್ಕಾರವು ಸಾರಿಗೆ ಮಂಡಳಿ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಇದರಿಂದ ಸಾರಿಗೆ ಅನುದಾನ ಮತ್ತು ಸರ್ಕಾರದ ಅನುದಾನ ಸೇರಿ ರಾಜ್ಯದಲ್ಲಿರುವ ವಾಣಿಜ್ಯ ಪರವಾನಗಿ ಹೊಂದಿರುವ ಎಲ್ಲ ಖಾಸಗಿ ವಾಹನ ಚಾಲಕರು, ನಿರ್ವಾಹಕರು ಗ್ಯಾರೇಜ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 35 ಲಕ್ಷ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ನೀಡಿ ಅವರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.
ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫ್ಲಿಪ್ಕಾರ್ಟ್, ಅಮೆಜಾನ್ ಇತರೆ ಕಾರ್ಮಿಕ ವರ್ಗದವರಿಗೂ ಹಾಗೂ ಮನೆ ಕೆಲಸಗಾರರು ಕಾರ್ಮಿಕ ಕಾರ್ಡ್ ಸೌಲಭ್ಯ ನೀಡಿ ಸಾಮಾಜಿಕ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಲಮಾಣಿ, ಹಿರೇಕೆರೂರು ಶಾಸಕ ಯು.ಬಿ. ಬಣಕಾರ್ ಇದ್ದರು.
ಹಿಂದೂಸ್ತಾನ್ ಸಮಾಚಾರ್ ಮಂಜುನಾಥ ಗುಡಿಸಾಗರ/ ಪಿವಿ
