
ಬಳ್ಳಾರಿ, 10 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರದಲ್ಲಿ ಆದ್ಯತೆ ಇಲ್ಲದೆ ಕೈಗೊಂಡಿರುವ ಅವೈಜ್ಞಾನಿಕ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಜನತೆಗೆ ಸೂಕ್ತ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‍ಎಚ್‍ಎಸ್) ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವವಹಿಸಿದ್ದ ಬಿಎನ್‍ಎಚ್‍ಎಸ್‍ನ ಜಿಲ್ಲಾ ಸಂಚಾಲಕ ಸೋಮಶೇಖರ ಗೌಡ ಅವರು, ನಗರಾದ್ಯಂತ ಕೈಗೊಂಡಿರುವ ಅನೇಕ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುವ ಮೂಲಕ ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯ ಮೇಲೆ ತೀವ್ರವಾದ ಧಕ್ಕೆ ಉಂಟಾಗುತ್ತಿದೆ. ಗುತ್ತಿಗೆದಾರರು ಕಳಪೆ ಕಾಮಗಾರಿಯ ಜೊತೆಯಲ್ಲಿ ಅನಗತ್ಯ ವಿಳಂಬ ಮಾಡುವ ಮೂಲಕ ಸಾರ್ವಜನಿಕರಿಗೆ ಉದ್ದೇಶಪೂರ್ವಕ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಳ್ಳಾರಿ ನಗರದಲ್ಲಿ ಬಾರಿ ವಾಹನಗಳ ಸಂಚಾರ ತಡೆಯಲು ತುರ್ತಾಗಿ ವರ್ತುಲ ರಸ್ತೆ ನಿರ್ಮಿಸಿ, ರಾತ್ರಿ ವೇಳೆಯಲ್ಲಿ ಕಾಮಗಾರಿಯ ಕೆಲಸಗಳನ್ನು ಕೈಗೊಂಡು ಜನತೆಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಬೇಕಿದೆ. ಹಳೆಯ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ತಡೆ ಮಾಡಿ ಕಾಮಗಾರಿ ನಡೆಸುತ್ತಿರುವುದು ಅವೈಜ್ಞಾನಿಕ. ವಾಲ್ಮೀಕಿ ವೃತ್ತದಲ್ಲಿಯ ಕಾಮಗಾರಿ ಪ್ರತೀಕಾರ ನಡೆಸುತ್ತಿರುವಂತೆ ಕಾಣುತ್ತಿದೆ ಎಂದು ಅವರು ಟೀಕಿಸಿದರು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ನಾಗರತ್ನ ಅವರು, ಬಳ್ಳಾರಿ ನಗರವು ಕುಣಿಗಳ ರಾಜಧಾನಿ ಆಗಿದೆ. ನಗರಾದ್ಯಂತ ರಸ್ತೆಗಳು – ವೃತ್ತಗಳು ಹಂಪೆಯ ಸ್ಮಾರಕಗಳನ್ನು ನೆನಪಿಸುತ್ತಿವೆ. ಜನಪ್ರತಿನಿಧಿಗಳು – ಅಧಿಕಾರಿಗಳು ಜನಸಾಮಾನ್ಯರ ಆರೋಗ್ಯ, ಸುರಕ್ಷತೆ ಮತ್ತು ಸಂರಕ್ಷಣೆಯ ಕಡೆ ಗಮನ ನೀಡದೇ ಉದ್ದೇಶಪೂರ್ವಕವಾಗಿ ಜನರಿಗೆ ಕಿರುಕುಳ ನೀಡುತ್ತಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದರು.
ಸಮಿತಿಯ ಸದಸ್ಯರಾದ ಮಂಜುನಾಥ್, ಪದಾಧಿಕಾರಿಗಳಾದ ಶ್ಯಾಮಸುಂದರ್, ಗುರುರಾಜ್, ಗೋಪಾಲಕೃಷ್ಣ, ವೀರೇಶ್, ಅಂಥೋನಿ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಮೇಯರ್ ಅವರಿಗೆ ಈ ಕುರಿತು ಆಕ್ರೋಶದ ಮನವಿಯನ್ನು ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್
