ಇಂಫಾಲ, 10 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಣಿಪುರದ ಭದ್ರತಾ ಪಡೆಗಳು ನಿಷೇಧಿತ ಕಾಂಗ್ಲೇ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್) ಸಂಘಟನೆಯ ಉಗ್ರನನ್ನು ಬಂಧಿಸಿದ್ದು, ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಮಣಿಪುರ ಪೊಲೀಸ್ ಪ್ರಧಾನ ಕಚೇರಿ ಶುಕ್ರವಾರ ತಿಳಿಸಿದೆ.
ಪೊಲೀಸರ ಪ್ರಕಾರ, ನಿಷೇಧಿತ ಸಂಘಟನೆಯ ಸ್ವಯಂ ಘೋಷಿತ “ಹೆಡ್ ಕಾನ್‌ಸ್ಟೆಬಲ್”ನನ್ನು ಗುರುವಾರ ಇಂಫಾಲ್ ಪಶ್ಚಿಮ ಜಿಲ್ಲೆಯ ಉರಿಪೋಕ್ ಪ್ರದೇಶದಿಂದ ಬಂಧಿಸಲಾಗಿದೆ. ರಾಜ್ಯಾದ್ಯಂತ ಸೂಕ್ಷ್ಮ ಹಾಗೂ ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ತೀವ್ರ ಶೋಧ ಮತ್ತು ಪ್ರದೇಶ ಪ್ರಾಬಲ್ಯ ಕಾರ್ಯಾಚರಣೆಗಳ ಭಾಗವಾಗಿ ಈ ಬಂಧನ ನಡೆದಿದೆ.
ಇದೇ ವೇಳೆ, ಗುರುವಾರ ಇಂಫಾಲ್ ಪೂರ್ವ ಮತ್ತು ಕಾಕ್ಚಿಂಗ್ ಜಿಲ್ಲೆಗಳ ಎರಡು ಸ್ಥಳಗಳಿಂದ 13 ಬಂದೂಕುಗಳು ಮತ್ತು ಮದ್ದುಗುಂಡುಗಳು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ದೀರ್ಘಕಾಲದ ಜನಾಂಗೀಯ ಅಶಾಂತಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ದಂಗೆ ನಿಗ್ರಹ ಮತ್ತು ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ನಿರಂತರ ಶೋಧ ಕಾರ್ಯಾಚರಣೆಗಳನ್ನು ಮುಂದುವರೆಸುತ್ತಿವೆ.
ಮೇ 2023ರಲ್ಲಿ ಮೈಟೈ ಮತ್ತು ಕುಕಿ-ಝೋ ಸಮುದಾಯಗಳ ನಡುವಿನ ಘರ್ಷಣೆಯಿಂದ ಮಣಿಪುರ ಉದ್ವಿಗ್ನತೆಯನ್ನು ಎದುರಿಸುತ್ತಿದ್ದು, ಇದುವರೆಗೆ 260 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ, ರಾಜ್ಯವು ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದು, ಮಣಿಪುರ ವಿಧಾನಸಭೆ ಅಮಾನತಿನಲ್ಲಿದೆ. ಮತ್ತಷ್ಟು ಹಿಂಸಾಚಾರವನ್ನು ತಡೆಗಟ್ಟಲು ಹಾಗೂ ಉಗ್ರ ಚಟುವಟಿಕೆಗಳನ್ನು ನಿಗ್ರಹಿಸಲು ಭದ್ರತಾ ಸಂಸ್ಥೆಗಳು ಕಟ್ಟುನಿಟ್ಟಿನ ನಿಗಾವಹಣೆ ಮತ್ತು ನಿರಂತರ ಶೋಧ ಕಾರ್ಯಾಚರಣೆಗಳನ್ನು ರಾಜ್ಯದಾದ್ಯಂತ ಮುಂದುವರೆಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
