


ಕೊಪ್ಪಳ, 6 ನವೆಂಬರ್ (ಹಿ.ಸ):
ಆ್ಯಂಕರ್ : ಅಪರ ಜಿಲ್ಲಾಧಿಕಾರಿಗಳಾದ ಡಾ.ಕೆ.ಆರ್.ದುರುಗೇಶ ಅವರ ನೇತೃತ್ವದಲ್ಲಿ, ಕೊನೆಯ ದಿನವಾದ ನವೆಂಬರ್ 6ರಂದು ಸಹ ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಅಭಿಯಾನ ಚುರುಕಿನಿಂದ ನಡೆಯಿತು.
ತಮ್ಮ ಎಂದಿನ ಕಾರ್ಯದೊತ್ತಡದ ಮಧ್ಯೆಯೂ ಅಪರ ಜಿಲ್ಲಾಧಿಕಾರಿಗಳು ನಗರದ ವಿವಿಧೆಡೆ ಸಂಚರಿಸಿ ಮತದಾರರ ನೋಂದಣಿ ಅರ್ಜಿಯನ್ನು ನೀಡಿ ಸ್ಥಳದಲ್ಲಿಯೇ ಭರ್ತಿ ಮಾಡುವುದರ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಇತರರಿಗೆ ತಿಳಿಸಿ ನೋಂದಣಿ ಪ್ರಮಾಣದ ಪ್ರಗತಿಗೆ ಕ್ರಮ ವಹಿಸಿದರು.
ಸೇವಾ ಕಾಲೇಜ್, ಆರ್ಡಿಸಿಸಿ ಬ್ಯಾಂಕ್, ಎಸ್ಆರ್ಪಿಎಸ್ ಕಾಲೇಜ್, ರೇಸ್ ಕಾನ್ಸೆಪ್ಟ್ ಸ್ಕೂಲ್, ಬೆಸ್ಟ್ ಕಾಲೇಜ್, ವಿಎಲ್ಡಿ ಕಾಲೇಜ್, ಎಎಂಇ ಕಾಲೇಜ್, ಪ್ರಮಾಣ ಪಿಯು ಕಾಲೇಜ್, ವಿದ್ಯಾನಿಧಿ ಪಿಯು ಕಾಲೇಜ್ ಸೇರಿದಂತೆ ವಿವಿಧೆಡೆ ಬೆಳಗ್ಗೆಯಿಂದ ಸಂಜೆವರೆಗೆ ತೆರಳಿ ಅಲ್ಲಿನ ಅರ್ಹ ಪದವೀಧರರಿಗೆ ಮತದಾರರ ನೋಂದಣಿ ನಮೂನೆ ಕೊಡಿಸಿ ಭರ್ತಿ ಮಾಡಿಸುವುದು ಸೇರಿದಂತೆ ನಾನಾ ಕಾರ್ಯದ ನೋಂದಣಿ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದರಿಂದ ಕೊನೆಯ ದಿನವಾದ ನವೆಂಬರ್ 6ರಂದು ರಾಯಚೂರು ತಾಲೂಕಿನಲ್ಲಿ 2712, ಮಾನವಿ ತಾಲೂಕಿನಲ್ಲಿ 1084, ಸಿರವಾರ ತಾಲೂಕಿನಲ್ಲಿ 660, ದೇವದುರ್ಗ ತಾಲೂಕಿನಲ್ಲಿ 730, ಲಿಂಗಸಗೂರು ತಾಲೂಕಿನಲ್ಲಿ 1447, ಸಿಂಧನೂರ ತಾಲೂಕಿನಲ್ಲಿ 915 ಮತ್ತು ಮಸ್ಕಿ ತಾಲೂಕಿನಲ್ಲಿ 694 ರಷ್ಟು ಸೇರಿ ಒಟ್ಟು 8242 ದಾಖಲೆಯ ಪ್ರಮಾಣದ ಮತದಾರರ ನೋಂದಣಿಗಳು ಸ್ವೀಕೃತವಾದವು.
ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಪ್ರಕ್ರಿಯೆ ರಾಯಚೂರು ಜಿಲ್ಲೆಯಲ್ಲಿ ಆರಂಭದಿಂದ ಕೊನೆಯ ದಿನದವರೆಗೂ ಅಚ್ಚುಕಟ್ಟಾಗಿ ನಡೆಯಿತು. ಅಪರ ಜಿಲ್ಲಾಧಿಕಾರಿಗಳು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿರಂತರ ಸಂದೇಶ ರವಾನಿಸಿ ಅಭಿಯಾನದಲ್ಲಿ ಸಕ್ರಿಯ ಭಾಗಿಯಲು ತಿಳಿಸಿದ್ದರಿಂದ ನವೆಂಬರ್ 5ರಂದು ಬಿರುಸಿನ ಪ್ರಕ್ರಿಯೆ ನಡೆದು ಜಿಲ್ಲೆಯಲ್ಲಿ ಒಟ್ಟು 1995 ಮತದಾರ ನೋಂದಣಿ ಅರ್ಜಿಗಳು ಸ್ವೀಕೃತವಾಗಿದ್ದವು. 2023ರ ಸೆ.30ರಿಂದ ನ.5ರವರೆಗಿನ 9534 ಸ್ವೀಕೃತಿಗಳು ಮತ್ತು ಕೊನೆಯ ದಿನದ ಸ್ವೀಕೃತಿಗಳು 8242 ಸ್ವೀಕೃತಿಗಳು ಸೇರಿ ಒಟ್ಟು 17,776 ಮತದಾರರ ನೋಂದಣಿ ಸ್ವೀಕೃತವಾಗಿವೆ.
ಅಪರ ಜಿಲ್ಲಾಧಿಕಾರಿಗಳಿಂದ ಝೂಮ್ ಸಭೆ: ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚರ್ಚಿಸಲು ಅಪರ ಜಿಲ್ಲಾಧಿಕಾರಿಗಳು ನವೆಂಬರ್ 5ರಂದು ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಝೂಮ್ ಸಭೆ ನಡೆಸಿ ನೋಂದಣಿ ಪ್ರಕ್ರಿಯೆ ಬಗ್ಗೆ ಆಯಾ ಇಲಾಖೆಗಳಿಂದ ಮಾಹಿತಿ ಪಡೆದರು. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿ ಮಾಡಿಸಲು ಮತ್ತು ತಮ್ಮ ತಮ್ಮ ಕುಟುಂಬದಲ್ಲಿನ ಪದವೀಧರರಿಗೂ ವಿಷಯ ತಿಳಿಸಿ ಅವರನ್ನು ಸಹ ಈ ಮತದಾರರ ಪಟ್ಟಿ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದರು.
