
ಕೋಲಾರ,23ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಹಾಡು ಹಗಲೇ ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗು ಕಾಂಗ್ರೆಸ್ ಮುಖಂಡ ಎಂ ಶ್ರೀನಿವಾಸನ್ ಬರ್ಬರವಾಗಿ ಕೊಲೆಯಾಗಿದ್ದಾರೆ. ಶ್ರೀನಿವಾಸಪುರ ಪಟ್ಟಣದ ಹೊರವಲಯದ ಮುಳಬಾಗಿಲು ರಸ್ತೆಯಲ್ಲಿ ಶ್ರೀನಿವಾಸನ್ ಬಾರ್ ತೆರೆಯಲು ಹೊಸ ಕಟ್ಟಡ ನಿರ್ಮಿಸುತ್ತಿದ್ದರು. ಸೋಮವಾರ ಮಧ್ಯಾಹ್ನ ಸುಮಾರು 12 ಗಂಟೆಯಲ್ಲಿ ಕಟ್ಟಡ ನಿರ್ಮಾಣ ಸ್ಥಳಕ್ಕೆತೆರಳಿದ್ದರು, ಶ್ರೀನಿವಾಸನ್ ಜೊತೆಗಿದ್ದ ಕಾರು ಚಾಲಕ ಮತ್ತು ಮತ್ತೊಬ್ಬ ವ್ಯಕ್ತಿಯನ್ನು ಚಹಾ ತರಲು ಶ್ರೀನಿವಾಸಪುರ ಪಟ್ಟಣಕ್ಕೆ ಕಳುಹಿಸಲಾಗಿತ್ತು, ಆ ವೇಳೆ ಸಂಚು ಹಾಕಿ ಕಾಯುತ್ತಿದ್ದ 6 ಮಂದಿ ಯುವಕರು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದರು. ನಿಮ್ಮ ಬಳಿ ಮಾತನಾಡುವುದು ಇದೆ ಎಂದು ಹೇಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಹೊರಗೆ ಕರೆದರು. ಶ್ರೀನಿವಾಸ್ ಹೊರಗೆ ಬರುತ್ತಿದ್ದಂತೆ ಚಾಕುವಿನಿಂದ ಇರಿದು ಗಾಯಗೊಳಿಸಿದರು ಎಂದು ತಿಳಿದು ಬಂದಿದೆ. ಆ ವೇಳೆ ಚಹಾ ತರಲು ಹೋಗಿದ್ದವರು ವಾಪಸ್ಸು ಬಂದಿದ್ದರು ಅವರು ಆರೋಪಿಗಳನ್ನು ನೋಡಿದರು ಎನ್ನಲಾಗಿದೆ. ತಮ್ಮ ಗುರುತು ಪತ್ತೆ ಹಚ್ಚುತ್ತಾರೆ ಎಂಬ ಕಾರಣಕ್ಕೆ ಹಂತಕರು ಅವರನ್ನು ಅಟ್ಟಾಡಿಸಿಕೊಂಡು ಹೋದರು.ಭೀತಿಗೊಂಡ ಅವರು ಅಲ್ಲಿಂದ ಪರಾರಿಯಾದರು ಎಂದು ತಿಳಿದುಬಂದಿದೆ.
ಕೂಡಲೇ ಹಂತಕರು ದ್ವಿಚಕ್ರ ವಾಹನಗಳಲ್ಲಿ ಮೂಡಿಗೆರೆ- ಆಂಧ್ರಪ್ರದೇಶದ ವಿ.ಕೋಟೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪರಾರಿಯಾದರು ಎಂದು ತಿಳಿದುಬಂದಿದೆ..
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿತು, ರಕ್ತದ ಮಡವಿನಲ್ಲಿದ್ದ ಶ್ರೀನಿವಾಸನ್ ಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲಾಯಿತು. ಆ ವೇಳೆಗೆ ಶ್ರೀನಿವಾಸ್ ಕೊನೆಯುಸಿರು ಎಳೆದಿದ್ದ.
ಮರಣದ ಸುದ್ದಿ ತಿಳಿಯುತ್ತಿದ್ದಂತೆ ಶ್ರೀನಿವಾಸಪುರ ಪಟ್ಟಣದಲ್ಲಿ ಪ್ಲೆಕ್ಸ್ ಗಳನ್ನು ಹಾಕಿ ಸಂತಾಪ ವ್ಯಕ್ತಪಡಿಸಲಾಗಿದೆ.
ಒಂದು ಕಾಲದಲ್ಲಿ ಶ್ರೀನಿವಾಸನ್ ಜನತಾ ಪರಿವಾರದಲ್ಲಿ ಗುರ್ತಿಸಿಕೊಂಡಿದ್ದ, ಕಳೆದ 2009 ರಲ್ಲಿ ಕೋಲಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಆ ಸಂದರ್ಭದಲ್ಲಿ ಕೋಲಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಂದ ನಾಲ್ಕು ಲಕ್ಷ ರೂ.ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು ಈ ಪ್ರಕರಣದಲ್ಲಿ ಬೆಂಗಳೂರು ವಿಶೇಷ ಲೋಕಾಯುಕ್ತ ನ್ಯಾಯಾಲಯ ತೀರ್ಪು ನೀಡಿತ್ತು.. ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಪ್ರಕರಣ ಬಾಕಿ ಇದೆ..
ಶ್ರೀನಿವಾಸಪುರ ಎಪಿಎಂಸಿ ಅಧ್ಯರಾಗಿ ಒಂದು ಅವಧಿಗೆ ಸೇವೆ ಸಲ್ಲಿಸಿದ್ದ, ಶ್ರೀನಿವಾಸಪುರ ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಜನಸಾಮಾನ್ಯರು ಆತನನ್ನು ಕೌನ್ಸಿಲರ್ ಸೀನಪ್ಪ ಎಂದು ಕರೆಯುತ್ತಿದ್ದರು. ಕಳೆದ 2018 ರಲ್ಲಿ ಜನತಾದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಶ್ರೀನಿವಾಸನ್ ಸೇರ್ಪಡೆಯಾಗಿದ್ದ. ಮೂಲತಃ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಶ್ರೀನಿವಾಸ್ ಕಳೆದ 2004 ರಲ್ಲಿ ಶ್ರೀನಿವಾಸಪುರ ಹೊರವಲಯದ ಪುಂಗನೂರು ಕ್ರಾಸ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಂದಿನ ಸಂಸತ್ ಸದಸ್ಯ ಕೆ.ಹೆಚ್ ಮುನಿಯಪ್ಪನವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ ಇದರಿಂದಾಗಿ ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡಲಾಗಿತ್ತು.ಆ ನಂತರದ ದಿನಗಳಲ್ಲಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿಯವರ ಸಮೀಪವರ್ತಿಯಾಗಿದ್ದ.
ಆದರೆ ಕಳೆದ 2018 ರಲ್ಲಿ ಜನತಾದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಅಂದಿನಿಂದ ಶ್ರೀನಿವಾಸನ್ ರಮೇಶ್ ಕುಮಾರ್ ಆಪ್ತ ವಲಯದಲ್ಲಿ ಗುರ್ತಿಸಿಕೊಂಡಿದ್ದ. ಮೊದಲ ಭಾರಿಗೆ 2009 ರಲ್ಲಿ ಕೋಲಾರ ತಾಲ್ಲೂಕಿನ ಹೋಳೂರು ಜಿ.ಪಂ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಆದರೆ ಮುಂದಿನ ಚುನಾವಣೆಯಲ್ಲಿ ಶ್ರೀನಿವಾಸಪುರ ತಾಲ್ಲೂಕು ಗೌನಿಪಲ್ಲಿ ಕ್ಷೇತ್ರದಿಂದ ಜಿ.ಪಂ ಗೆ ಸ್ಪರ್ಧಿಸಿ ಪರಾಭವಗೊಂಡಿದ್ದ.
ಮೃತ ಶ್ರೀನಿವಾಸನ್ ಗೃಹ ಸಚಿವ ಡಾ.ಜಿ ಪರಮೇಶ್ವರ್ ರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರೊಂದಿಗೆ ಒಡನಾಟ ಹೊಂದಿದ್ದು ಡಾ.ಜಿ ಪರಮೇಶ್ವರ್ ಶ್ರೀನಿವಾಸನ್ ರವರ ಖಾಸಗಿ ಸಮಾರಂಭಗಳಿಗೆ ಹಲವಾರು ಭಾರಿ ಭೇಟಿ ನೀಡಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಶ್ರೀನಿವಾಸಪುರದಲ್ಲಿ ರಸ್ತೆಯ ಮಧ್ಯೆ ನಿಲ್ಲಿಸಿದ್ದನ್ನು ಪ್ರಶ್ನೆ ಮಾಡಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆಗ ಶ್ರೀನಿವಾಸಪುರ ಪೊಲೀಸರು ಬಂಧಿಸಿಜೈಲಿಗೆ ಕಳುಹಿಸಿದ್ದರು.
ಲೋಕಾಯುಕ್ತ ಪ್ರಕರಣ ಸೇರಿದಂತೆ ಪೊಲೀಸ್ ಹಲ್ಲೆ ಪ್ರಕರಣ ನ್ಯಾಯಾಲಯದ ಮುಂದೆ ಭಾಕಿ ಇದೆ..
ಶ್ರೀನಿವಾಸನ್ ರವರ ಪತ್ನಿ ಡಾ.ಚಂದ್ರಕಳಾ ಸರ್ಕಾರಿ ವೈದ್ಯಾಧಿಕಾರಿಯಾಗಿದ್ದರು. ಅವರು ಖ್ಯಾತಿ ಶುಶ್ರೂತಿ ತಜ್ಞರಾಗಿದ್ದಾರೆ. ಸರ್ಕಾರಿ ವೈದ್ಯಾಧಿಕಾರಿ ಹುದ್ದೆಗೆ ರಾಜೀನಾಮೇ ನೀಡಿ ಖಾಸಗಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ..
ಶ್ರೀನಿವಾಸಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಕೋಲಾರ ಎಸ್.ಪಿ ನಾರಾಯಣ್ ಸ್ಥಳಕ್ಕೆ ಭೇಟಿ ನೀಡಿದ್ದು ಶ್ರೀನಿವಾಸಪುರ ದಲ್ಲಿ ಬಿಗುವಿನ ವಾತಾವರಣ ಇದ್ದು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ..
ಹಿಂದೂಸ್ತಾನ್ ಸಮಾಚಾರ್
