ಕೊಪ್ಪಳ, 17 ಅಕ್ಟೋಬರ್ (ಹಿ.ಸ):
ಆ್ಯಂಕರ್ : ಗದಗ ವಿಭಾಗದ ಅಂಚೆ ಅಧೀಕ್ಷಕರು ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ಪ್ರಸ್ತಾಪಿಸಿದ್ದು, ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಶೈಕ್ಷಣಿಕ ಪ್ರಮಾಣಪತ್ರದ ನಕಲುಗಳೊಂದಿಗೆ ಅಕ್ಟೋಬರ್ 27 ರಂದು ಬೆಳಿಗ್ಗೆ 10.00 ಗಂಟೆಗೆ ಗದಗ ಎಪಿಎಂಸಿ ಯಾರ್ಡ್, ಚೇಂಬರ್ ಆಫ್ ಕಾಮರ್ಸ್ ಎದುರುಗಡೆ ಇರುವ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಯಲಿರುವ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಹತ್ತನೇ ತರಗತಿ ಉತ್ತೀರ್ಣರಾಗಿದ್ದು ಕಡ್ಡಾಯವಾಗಿ 18 ರಿಂದ 50 ವರ್ಷದ ಒಳಗಿನವರಾಗಿರಬೇಕು. ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತ ಯುವಕರು, ವಿಮಾ ಕಂಪನಿಗಳ ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ಮಾಜಿ ಗ್ರಾಮ ಪಂಚಾಯಿತಿಯ ಸದಸ್ಯರು ಸಂದರ್ಶನಕ್ಕೆ ಹಾಜರಾಗಬಹುದು. ಅಂಚೆ ವಿಭಾಗದ ಮುಖ್ಯಸ್ಥರಿಗೆ ಸಮಂಜಸವೆಂದು ಕಂಡುಬಂದ ಯಾವುದೇ ಅಭ್ಯರ್ಥಿಗಳು ಆಯ್ಕೆಯಾದ ಪಕ್ಷದಲ್ಲಿ ಅವಕಾಶ ನೀಡಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳು ರೂ.5000/- ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ ಪತ್ರ ರೂಪದಲ್ಲಿ ಭದ್ರತಾ ಠೇವಣಿಯನ್ನುಇಡಬೇಕಾಗುತ್ತದೆ. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಅವರು ಮಾಡಿದ ವ್ಯವಹಾರಕ್ಕೆ ತಕ್ಕಂತೆ ಸೂಕ್ತ ಕಮಿಷನ್ ನೀಡಲಾಗುವುದು ಯಾವುದೇ ನಿಗದಿತ ವೇತನ ಇರುವುದಿಲ್ಲ. ಅಭ್ಯರ್ಥಿಗಳು ಬೇರೆ ಯಾವುದೇ ವಿಮಾ ಕಂಪನಿ,ಸಂಸ್ಥೆ ಸಂಘಗಳ ಏಜೆಂಟ್ ಆಗಿರಬಾರದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಗದಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
