ಬೆಂಗಳೂರು,
ಆ್ಯಂಕರ್ :ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನು ಮುಂದುವರಿಸಿರುವ ರಾಷ್ಟ್ರೀಯ ತನಿಖಾ ದಳ ಬುಧವಾರ ನಗರದ ಐದು ಕಡೆ ದಾಳಿ ನಡೆಸಿದೆ.
ಶಂಕಿತ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಅಧಿಕಾರಿಗಳು ಬೆಂಗಳೂರಿನ ಇಬ್ಬರು ಶಂಕಿತರನ್ನು ಶನಿವಾರ (ಮಾ.23) ಸಂಜೆ ವಶಕ್ಕೆ ಪಡೆದುಕೊಂಡಿರುವ ವಿಚಾರ ಮಂಗಳವಾರ ತಿಳಿದುಬಂದಿತ್ತು.
ಶಿವಮೊಗ್ಗ ಜಿಲ್ಲೆಯಲ್ಲೂ ಎನ್ ಐ ಎ ದಾಳಿ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ 5ಕ್ಕೂ ಹೆಚ್ಚು ಕಡೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿ ಸೇರಿದಂತೆ 5 ಕಡೆ ದಾಳಿ ಮಾಡಲಾಗಿದೆ. ಬೆಂಗಳೂರಿನಿಂದ 5ಕ್ಕೂ ಹೆಚ್ಚು ವಾಹನಗಳಲ್ಲಿ ಬಂದಿರುವ ಎನ್ಐಎ ತಂಡದಲ್ಲಿ 15ಕ್ಕೂ ಹೆಚ್ಚು ಅಧಿಕಾರಿಗಳಿದ್ದಾರೆ.
ಚೆನ್ನೈಯಲ್ಲೂ ಎನ್ ಐ ಎ ಶೋಧ
ಚೆನ್ನೈನ ಮೂರು ಕಡೆ ಕೂಡ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪ್ರಕರಣ ಸಂಬಂಧ ಶಂಕಿತರ ಶೋಧ ನಡೆಸಿದೆ. ಉಗ್ರರಿಗೆ ಹಣದ ನೆರವು, ಉಗ್ರರ ಪರ ಹಣ ಸಂಗ್ರಹ ಆರೋಪದ ಮೇಲೆ ಶಂಕಿತರ ಮನೆಗಳಲ್ಲಿ ಶೋಧ ನಡೆಸಿದೆ.
