ನವದೆಹಲಿ, 01 ಜನವರಿ (ಹಿ.ಸ.) :
ಆ್ಯಂಕರ್ : ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಹೊಸ ವರ್ಷದ ಅಂಗವಾಗಿ ತನ್ನ ರಾಷ್ಟ್ರವ್ಯಾಪಿ ವಾಯ್ಸ್ ಓವರ್ ವೈ-ಫೈ ಸೇವೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಈ ಸೇವೆಯ ಮೂಲಕ ದೇಶದ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಗ್ರಾಹಕರು ವೈ-ಫೈ ಆಧಾರಿತ ಕರೆಗಳನ್ನು ಮಾಡುವ ಸೌಲಭ್ಯವನ್ನು ಪಡೆಯಲಿದ್ದಾರೆ.
ಮನೆಗಳು, ಕಚೇರಿಗಳು, ನೆಲಮಾಳಿಗೆಗಳು ಹಾಗೂ ಮೊಬೈಲ್ ಸಿಗ್ನಲ್ ದುರ್ಬಲವಾಗಿರುವ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿಯೂ ಸಹ ಸ್ಪಷ್ಟ ಮತ್ತು ಅಡೆತಡೆಯಿಲ್ಲದ ಕರೆ ಸಂಪರ್ಕ ಒದಗಿಸುವುದು ಈ ಸೇವೆಯ ಪ್ರಮುಖ ಉದ್ದೇಶವಾಗಿದೆ.
ಬಿಎಸ್ಎನ್ಎಲ್ ಮಾಹಿತಿ ಪ್ರಕಾರ, ವಿಓ ವೈ ಪೈ ಸೇವೆ ಐಪಿ ಮಲ್ಟಿಮೀಡಿಯಾ ಸಬ್‌ಸಿಸ್ಟಮ್ ತಂತ್ರಜ್ಞಾನವನ್ನು ಆಧರಿಸಿದೆ. ಇದು ವೈ-ಫೈ ಮತ್ತು ಮೊಬೈಲ್ ನೆಟ್‌ವರ್ಕ್‌ಗಳ ನಡುವೆ ಸರಾಗವಾಗಿ ಹಸ್ತಾಂತರ (ಹ್ಯಾಂಡೋವರ್) ಮಾಡಲು ಸಹಕಾರಿಯಾಗಿದೆ. ಯಾವುದೇ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಅಗತ್ಯವಿಲ್ಲದೆ, ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಫೋನ್ ಡಯಲರ್ ಬಳಸಿ ಕರೆಗಳನ್ನು ಮಾಡಬಹುದು.
ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಕವರೇಜ್ ಸೀಮಿತವಾಗಿರುವುದರಿಂದ, ಭಾರತ್ ಫೈಬರ್ ಅಥವಾ ಇತರೆ ಬ್ರಾಡ್‌ಬ್ಯಾಂಡ್ ಸೇವೆಗಳ ಮೂಲಕ ಸ್ಥಿರ ವೈ-ಫೈ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಈ ಸೇವೆ ಬಹಳ ಪ್ರಯೋಜನಕಾರಿಯಾಗಲಿದೆ ಎಂದು ಬಿಎಸ್ಎನ್ಎಲ್ ತಿಳಿಸಿದೆ. ಜೊತೆಗೆ, ವಿಓ ವೈ ಪೈ ಸೇವೆಯು ನೆಟ್‌ವರ್ಕ್ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿಯೂ ಸಹ ಸಹಾಯಕವಾಗಲಿದೆ.
ಮುಖ್ಯವಾಗಿ, ವೈ-ಫೈ ಕರೆಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ ಎಂದು ಬಿಎಸ್ಎನ್ಎಲ್ ಸ್ಪಷ್ಟಪಡಿಸಿದೆ. ಈ ಸೇವೆ ಸಂಸ್ಥೆಯ ನೆಟ್‌ವರ್ಕ್ ಆಧುನೀಕರಣ ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದು, ದೇಶಾದ್ಯಂತ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದೆ.
ಈ ವಿಓ ವೈ ಪೈ ಸೌಲಭ್ಯವು ಹೆಚ್ಚಿನ ಆಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದ್ದು, ಗ್ರಾಹಕರು ತಮ್ಮ ಹ್ಯಾಂಡ್‌ಸೆಟ್ ಸೆಟ್ಟಿಂಗ್‌ಗಳಲ್ಲಿ ವೈ-ಫೈ ಕರೆ ಆಯ್ಕೆಯನ್ನು ಸಕ್ರಿಯಗೊಳಿಸಬೇಕು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
