ಅಯೋಧ್ಯೆ, 22 ಜನವರಿ(ಹಿ.ಸ):
ಆ್ಯಂಕರ್ :
ಇಂದು ನಡೆಯಲಿರುವ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗಾಗಿ ಇಡೀ ಅಯೋಧ್ಯೆನಗರ ಸಜ್ಜುಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ. ಅಯೋಧ್ಯೆ ಈಗಾಗಲೇ ಅಪೂರ್ವ ಭಕ್ತಿ ಉತ್ಸಾಹದಿಂದ ಪ್ರತಿಧ್ವನಿಸುತ್ತಿದೆ. ಸಾವಿರಾರು ಸಾಧು-ಸಂತರು, ಭಕ್ತರು ಈ ಅಪರೂಪದ ದೃಶ್ಯವನ್ನು ಕಣ್ಮನಗಳಲ್ಲಿ ತುಂಬಿಕೊಳ್ಳಲು ಅಯೋಧ್ಯೆಗೆ ಬಂದಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ವಿವಿಧ ನದಿಗಳಿಂದ ತರಲಾದ ಪುಣ್ಯಜಲಗಳಿಂದ ಶ್ರೀರಾಮಲಲ್ಲಾ ಮೂರ್ತಿಗೆ ಅಭಿಷೇಕ ಮಾಡಲಾಯಿತು. ಎಲ್ಲೆಡೆ ಜೈಶ್ರೀರಾಮ ಘೋಷ ಕೇಳಿ ಬರುತ್ತಿದೆ. ಇಡೀ ಅಯೋಧ್ಯೆ ನಗರಿ ತಳಿರು-ತೋರಣ ಪುಷ್ಪಗಳಿಂದ ಅಲಂಕೃತಗೊಂಡಿದೆ . ಭಗವಾನ್ ಶ್ರೀರಾಮನ ಕೃಪಾಕಟಾಕ್ಷಕ್ಕಾಗಿ ದೇಶ ವಿದೇಶಗಳ ಸಾವಿರಾರು ರಾಮಭಕ್ತರು ಅಯೋಧ್ಯೆ ತಲುಪಿದ್ದಾರೆ. ದೇವಾಲಯಗಳಲ್ಲಿ ಕೀರ್ತನೆ, ಭಜನೆ, ರಾಮಾಯಣ ಮತ್ತು ರಾಮಚರಿತಮಾನಗಳನ್ನು ನಿರಂತರವಾಗಿ ಪಠಿಸಲಾಗುತ್ತಿದೆ, ಪ್ರಸಾದ ವಿತರಣೆ ನಡೆಯುತ್ತಿವೆ ಮತ್ತು ರಸ್ತೆಗಳಲ್ಲಿ ಜನರು ಶ್ರೀರಾಮನನ್ನು ಜಪಿಸುತ್ತಿದ್ದಾರೆ. ಅಯೋಧ್ಯೆಯ ಗಡಿಯನ್ನು ನಿರ್ಬಂಧಿಸಲಾಗಿದ್ದು, ವಾಹನಗಳನ್ನು ಬೇರೆ ಮಾರ್ಗಗಳ ಕಡೆಗೆ ತಿರುಗಿಸಲಾಗಿದೆ. ಅಯೋಧ್ಯೆಯಲ್ಲಿ ಡ್ರೋನ್ಗಳಿಂದ ಪರಿವೀಕ್ಷಣೆ ನಡೆಸಲಾಗುತ್ತಿದ್ದು, ಬೀದಿಗಳಲ್ಲಿ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿ ರಾತ್ರಿಯಿಡೀ ಕಟ್ಟಡಗಳು ಮತ್ತು ಇತರ ಸ್ಥಳಗಳ ಶೋಧನೆ ನಡೆಸಿ ಅಯೋಧ್ಯೆಯ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು. ಶ್ರೀರಾಮ್ಲಲ್ಲಾ ವಿರಾಜ್ಮಾನ್ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರ ಮಾಡಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಪ್ರಸಾರಭಾರತಿ ವ್ಯಾಪಕ ವ್ಯವಸ್ಥೆ ಮಾಡಿವೆ.
ಹಿಂದೂಸ್ತಾನ್ ಸಮಾಚಾರ್
