ನವದೆಹಲಿ,
ಕೇಂದ್ರ ಚುನಾವಣಾ ಆಯೋಗ, ಇಂದು ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದೆ. ದೆಹಲಿಯ ವಿಜ್ಞಾನಭವನದಲ್ಲಿ ಕೇಂದ್ರ ಚುನಾವಣಾ ಆಯೋಗ ಇಂದು ಮಧ್ಯಾಹ್ನ ಈ ಬಗ್ಗೆ ಘೋಷಣೆ ಮಾಡಲಿದೆ.
ಲೋಕಸಭೆ ಹಾಗೂ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಆಯೋಗ ಪ್ರಕಟಿಸಲಿದೆ. ಪ್ರಸ್ತುತ ಲೋಕಸಭೆಯ ಅವಧಿ ಜೂನ್ ೧೬ರಂದು ಸಮಾಪನಗೊಳ್ಳಲಿದೆ. ೨೦೧೯ರಲ್ಲಿ ಲೋಕಸಭಾ ಚುನಾವಣೆಗಳು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಏಳು ಹಂತಗಳಲ್ಲಿ ನಡೆದಿದ್ದವು. ಈ ಬಾರಿ ಕೂಡ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ವಿವಿಧ ಹಂತಗಳಲ್ಲಿ ನಡೆಯುವುದೆಂದು ನಿರೀಕ್ಷಿಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ೫೪೩ ಲೋಕಸಭಾ ಕ್ಷೇತ್ರಗಳ ಪೈಕಿ ೩೦೩ ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಈ ಬಾರಿ ಆಡಳಿತಾರೂಡ ಬಿಜೆಪಿ, ಇದುವರೆಗೆ ೨೬೭ ಅಭ್ಯರ್ಥಿಗಳ ಉಮೇದುವಾರಿಕೆ ಪ್ರಕಟಿಸಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಲೋಕಸಭಾ ಚುನಾವಣೆಗಾಗಿ ೮೨ ಅಭ್ಯಥಿಗಳ ಹೆಸರು ಪ್ರಕಟಿಸಿದೆ. ಎಡ ಪಕ್ಷ, ಟಿಎಂಸಿ, ಆಮ್ಆದ್ಮಿ ಹಾಗೂ ಇನ್ನು ಇತರ ಪಕ್ಷಗಳು ವಿವಿಧ ಲೋಕಸಭಾ ಕ್ಷೇತ್ರಗಳಿಗಾಗಿ ಹೆಸರುಗಳನ್ನು ಪ್ರಕಟಿಸಿವೆ. ಚುನಾವಣೆಗೆ ದಿನಾಂಕ ಪ್ರಕಟವಾದ ದಿನದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ನಿರೀಕ್ಷೆ ಇದೆ.
