ಪಾಟ್ನಾ (ಬಿಹಾರ), 27 ಜನವರಿ :
ಆ್ಯಂಕರ್ : ಬಿಹಾರ ರಾಜಕೀಯ ವಿಪ್ಲವ ಮತ್ತೊಂದು ಘಟ್ಟ ತಲುಪಿದೆ. ಮೈತ್ರಿ ಪಕ್ಷ ಆರ್ಜೆಡಿ ಸಚಿವರ ನಡೆಗಳಿಂದ ಬೇಸತ್ತಿರುವ ಇಂಡಿಯಾ ಕೂಟದ ಪ್ರಮುಖ ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ನಾಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಂದೇ ಬಿಜೆಪಿ ಜೊತೆ ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ.
ಸರ್ಕಾರದ ಭಾಗವಾಗಿರುವ ಆರ್ಜೆಡಿ ಈಗಾಗಲೇ ನಿತೀಶ್ಕುಮಾರ್ ಜೊತೆಗೆ ಅಂತರ ಕಾಯ್ದುಕೊಂಡಿದೆ. ನಿನ್ನೆ ನಡೆದ ರಾಜ್ಯಪಾಲರ ಚಹಾ ಕೂಟಕ್ಕೂ ಗೈರಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಸರ್ಕಾರ ವಿಸರ್ಜನೆಯಾಗುವ ಸಾಧ್ಯತೆ ದಟ್ಟವಾಗಿದೆ.
ಪಕ್ಷಗಳ ಸಂಖ್ಯಾಬಲ ಹೇಗಿದೆ?: ಬಿಹಾರ ವಿಧಾನಸಭೆಯು 243 ಶಾಸಕ ಬಲ ಹೊಂದಿದೆ. ಇದರಲ್ಲಿ ಬಹುಮತಕ್ಕೆ 122 ಶಾಸಕರ ಅಗತ್ಯವಿದೆ. ಪಕ್ಷವಾರು ಲೆಕ್ಕಾಚಾರದಲ್ಲಿ ಪ್ರಸ್ತುತ ಬಿಜೆಪಿ 78 ಶಾಸಕರನ್ನು ಹೊಂದಿದೆ. ನಿತೀಶ್ಕುಮಾರ್ ನೇತೃತ್ವದ ಜೆಡಿಯು 45 ಶಾಸಕರು, ಜಿತನ್ ರಾಮ್ ಮಾಂಝಿ ಅವರ ಪಕ್ಷದ ಹೆಚ್ಎಎಂ 4, ಆರ್ಜೆಡಿ 79, ಕಾಂಗ್ರೆಸ್ 19, ಎಡಪಕ್ಷಗಳು 16, ಎಐಎಂಐಎಂ 1 ಮತ್ತು ಒಬ್ಬ ಪಕ್ಷೇತರ ಸದಸ್ಯ ಇದ್ದಾರೆ.
