ದೆಹಲಿ, 31 ಜನವರಿ:
ಆ್ಯಂಕರ್ :
ಆ್ಯಂಕರ್ :ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಇಂಗು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡುವುದರೊಂದಿಗೆ ಅಧಿವೇಶನ ಆರಂಭವಾಗಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಗುರುವಾರ ಮಧ್ಯಂತರ ಕೇಂದ್ರ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಮುಂಗಡ ಪತ್ರದ ಅಧಿವೇಶನ ಫೆಬ್ರವರಿ ೯ರವರೆಗೆ ನಡೆಯಲಿದೆ.
ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ, ಉಭಯ ಸದನಗಳ ಸುಗಮ ಕಲಾಪಮ ಖಚಿತಪಡಿಸಿಕೊಳ್ಳಲು ದೆಹಲಿಯಲ್ಲಿ ನಿನ್ನೆ ಸರ್ವಪಕ್ಷ ಸಭೆ ನಡೆಯಿತು.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಪೀಠಾಸೀನಾಧಿಕಾರಿಗಳ ನಿರ್ದೇಶನದಂತೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ. ಉಭಯ ಸದನಗಳಲ್ಲಿ ಕಲಾಪಗಳು ಸುಗಮವಾಗಿ ನಡೆಯಲು ವಿರೋಧ ಪಕ್ಷಗಳು ಕೇಂದ್ರ ಸರ್ಕಾರದೊಂದಿಗೆ ಸಹಕರಿಸಬೇಕು ಮತ್ತು ಸದನದ ಒಳಗೆ ಫಲಕಗಳನ್ನು ತರದಂತೆ ಅವರು ಒತ್ತಾಯಿಸಿದರು.
ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಮಾನತುಗೊಂಡಿದ್ದ ಸದಸ್ಯರ ಅಮಾನತ್ತನ್ನು ಹಿಂಪಡೆಯುವಂತೆ ಉಭಯ ಸದನಗಳ ಪೀಠಾಸೀನಾಧಿಕಾರಿಗಳಿಗೆ ಸರ್ಕಾರ ಮನವಿ ಮಾಡಿದೆ ಎಂದು ಅವರು ಹೇಳಿದರು.
ಈ ನಡುವೆ, ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ತಿವಾರಿ, ಸರ್ವ ಪಕ್ಷ ಸಭೆಯಲ್ಲಿ ಒಕ್ಕೂಟ ರಚನೆಯ ಮೇಲಿನ ಆರೋಪದ ದಾಳಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಲಾಯಿತು. ಮುಂಬರುವ ಮಧ್ಯಂತರ ಬಜೆಟ್ ಅಧಿವೇಶನದಲ್ಲಿ ದೇಶದಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಹೆಚ್ಚುತ್ತಿರುವ ಸಾಲದ ಸಮಸ್ಯೆಗಳನ್ನು ಕಾಂಗ್ರೆಸ್ ಮತ್ತು ಹಲವಾರು ವಿರೋಧ ಪಕ್ಷಗಳು ಪ್ರಸ್ತಾಪಿಸಲಿವೆ ಎಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಪಿಯೂಷ್ ಗೋಯಲ್ ಮತ್ತು ಅರ್ಜುನ್ ರಾಮ್ ಮೇಘವಾಲ್, ಕಾಂಗ್ರೆಸ್ ನಾಯಕರಾದ ಪ್ರಮೋದ್ ತಿವಾರಿ ಮತ್ತು ಕೆ. ಸುರೇಶ್, ಟಿಎಂಸಿ ನಾಯಕರಾದ ಸುದೀಪ್ ಬಂಡೋಪಾಧ್ಯಾಯ ಮತ್ತು ಸುಖೇಂದು ಶೇಖರ್ ರೇ, ಜೆಡಿಯು ನಾಯಕರಾದ ರಾಮ್ ನಾಥ್ ಠಾಕೂರ್, ಡಿಎಂಕೆ ನಾಯಕ ಟಿ.ಆರ್ ಬಾಲು, ಸಿಪಿಐ(ಎಂ) ನಾಯಕ ಪಿ.ಆರ್ ನಟರಾಜನ್, ಶಿವಸೇನೆ ನಾಯಕ ರಾಹುಲ್ ಶೆವಾಲೆ ಮತ್ತಿತರರು ಭಾಗವಹಿಸಿದ್ದರು.
