ಮೆಕ್ಸಿಕೋ, 31 ಜನವರಿ:
ಆ್ಯಂಕರ್ : ಮೆಕ್ಸಿಕೋದಲ್ಲಿ ಭೀಕರ ಅಪಘಾತ ಸಂಭವಿಸಿದ್ದು 19 ಜನ ದುರ್ಮರಣ ಹೊಂದಿದ್ದಾರೆ . ವಾಯುವ್ಯ ಮೆಕ್ಸಿಕೋದ ಸಿನಾಲೋವಾ ಎಂಬಲ್ಲಿ ಡಬಲ್ ಡೆಕ್ಕರ್ ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಭೀಕರ ಅಪಘಾತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಮತ್ತು 22 ಮಂದಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಡಬಲ್ ಡೆಕ್ಕರ್ ಬಸ್ ಮತ್ತು ಟ್ರಕ್ ಡಿಕ್ಕಿಯಾದ ರಭಸಕ್ಕೆ ವಾಹನಗಳ ನಡುವೆ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ. ಮಜಟ್ಲಾನ್ ಮತ್ತು ಲಾಸ್ ಮೊಚಿಸ್ ಅನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. 19 ಜನರ ಸುಟ್ಟ ದೇಹಗಳನ್ನು ಗುರುತಿಸಲಾಗಿದೆ ಎಂದು ಸಿನಾಲೋವಾ ರಾಜ್ಯದ ಅಟಾರ್ನಿ ಜನರಲ್ ಸಾರಾ ಕ್ವಿನೋನೆಜ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದರು. ಇನ್ನು ಅಪಘಾತದ ನಂತರ ಸ್ಥಳದಲ್ಲೇ ಬಸ್ ಹೊತ್ತಿ ಉರಿದಿದ್ದು, ಸ್ಥಳಕ್ಕೆ ತುರ್ತು ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
