ಮುಂಬಯಿ, 19 ಆಗಸ್ಟ್ (ಹಿ.ಸ.):
ಆ್ಯಂಕರ್:
ಬಾಲಿವುಡ್ ಮತ್ತು ಮರಾಠಿ ಚಿತ್ರರಂಗಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದ ಹಿರಿಯ ನಟ ಅಚ್ಯುತ ಪೋತದಾರ್ (91) ಅವರು ದೀರ್ಘಕಾಲದ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದರು. ಆಗಸ್ಟ್ 18 ರಂದು ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ.
ಅಚ್ಯುತ ಪೋತದಾರ್ ಅವರು ತಮ್ಮ ಸರಳ ಶೈಲಿ, ಸಹಜ ಅಭಿನಯದಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದರು. 1980ರಲ್ಲಿ ‘ಆಕ್ರೋಶ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಅವರು, ನಾಸಿರುದ್ದೀನ್ ಶಾ, ಓಂ ಪುರಿ ಮೊದಲಾದ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡಿದ್ದರು. ಸುಮಾರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಅವರು, ಪೋಷಕ ಪಾತ್ರಗಳಲ್ಲೂ ಪ್ರೇಕ್ಷಕರ ಮನ ಗೆದ್ದಿದ್ದರು.
ಅಮೀರ್ ಖಾನ್ ಅಭಿನಯದ ‘3 ಈಡಿಯಟ್ಸ್’ ಚಿತ್ರದಲ್ಲಿ ಪ್ರಾಧ್ಯಾಪಕರ ಪಾತ್ರದ ಮೂಲಕ ಅವರು ಹೆಚ್ಚಿನ ಜನಪ್ರಿಯತೆ ಪಡೆದರು. ಇದಲ್ಲದೆ, ‘ಲಗೇ ರಹೋ ಮುನ್ನಾಭಾಯ್’, ‘ರಂಗೀಲಾ’, ‘ಪರಿಣೀತಾ’, ‘ವಾಸ್ತವ್’, ‘ಫೆರಾರಿ ಕಿ ಸವಾರಿ’, ‘ದಬಾಂಗ್ 2’, ‘ಭೂತನಾಥ್’ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದರು.
ಸಿನಿಮಾಗಳ ಜೊತೆಗೆ ಹಲವಾರು ಟಿವಿ ಧಾರಾವಾಹಿಗಳಲ್ಲೂ ಕಾಣಿಸಿಕೊಂಡ ಅವರು, ಬಲವಾದ ಅಭಿನಯದ ಮೂಲಕ ಅಲ್ಲಿ ಸಹ ಪ್ರೇಕ್ಷಕರ ಹೃದಯ ಗೆದ್ದಿದ್ದರು.
ಅವರ ನಿಧನವು ಚಲನಚಿತ್ರ ಲೋಕದಲ್ಲಿ ಆಘಾತ ಮೂಡಿಸಿದ್ದು, ಸಹನಟರು, ನಿರ್ದೇಶಕರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.
—————
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
