ನಾಸಿಕ್, 11 ಜನವರಿ(ಹಿ.ಸ):
ಆ್ಯಂಕರ್ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ತಿಂಗಳ ೧೨ ರಂದು ಮಹಾರಾಷ್ಟ್ರದ ನಾಸಿಕ್ನಲ್ಲಿ ರಾಷ್ಟ್ರೀಯ ಯುವ ಉತ್ಸವ ಉದ್ಘಾಟಿಸಿ ಮಾತನಾಡಲಿದ್ದಾರೆ.
ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಮೌಲ್ಯಗಳನ್ನು ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತಿದೆ.
ಈ ವರ್ಷ ರಾಷ್ಟ್ರೀಯ ಯುವ ದಿನವನ್ನು ದೇಶದ ಎಲ್ಲ ಜಿಲ್ಲೆಗಳಲ್ಲಿ ಯುವ ಸಬಲೀಕರಣ ಇಲಾಖೆ ಸಚಿವಾಲಯ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಚರಿಸುತ್ತಿದೆ. ದೇಶದ ೭೫೦ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಪ್ರಮುಖ ನಗರಗಳಲ್ಲಿ ರಸ್ತೆ ಸುರಕ್ಷತೆ ಕುರಿತ ಅರಿವು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ನಿತೇಶ್ ಕುಮಾರ್ ಮಿಶ್ರ, ನನ್ನ ಭಾರತ-ವಿಕಸಿತ ಭಾರತ@೨೦೪೭ ಯುವ ಜನರಿಂದ ಯುವ ಜನರಿಗಾಗಿ ಎನ್ನುವುದು ಈ ಬಾರಿಯ ಧ್ಯೇಯ ವಾಕ್ಯವಾಗಿದೆ ಎಂದು ತಿಳಿಸಿದ್ದಾರೆ.
ದೇಶಾದ್ಯಂತ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕೆಲಸಗಳು ನಡೆಯಲಿವೆ. ಜೊತೆಗೆ ಸಚಿವರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ರಾಷ್ಟ್ರೀಯ ಯುವ ದಿನದ ಹಿನ್ನೆಲೆಯಲ್ಲಿ ಅನೇಕ ವಸ್ತು ಪ್ರದರ್ಶನಗಳು ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಅದರಲ್ಲಿ ಪ್ರಮುಖವಾಗಿ ಸಂಚಾರ ಸುರಕ್ಷತೆ, ಪೌಷ್ಠಿಕ ಆಹಾರ, ಪಥ್ಯ ಆಹಾರ ಸೇರಿದಂತೆ ವಿವಿಧ ವಿಷಯಗಳು ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
