ನವದೆಹಲಿ, 01 ಜನವರಿ (ಹಿ.ಸ.) :
ಆ್ಯಂಕರ್ : ಮುಂದಿನ ದಶಕದಲ್ಲಿ ದೇಶದ ವಾಯು ಭದ್ರತೆಯನ್ನು ಗಣನೀಯವಾಗಿ ಬಲಪಡಿಸುವ ಗುರಿಯೊಂದಿಗೆ, ಭಾರತದ ಪ್ರಮುಖ ಸ್ಥಾಪನೆಗಳನ್ನು ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳೊಂದಿಗೆ ಸಜ್ಜುಗೊಳಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ತಿಳಿಸಿದ್ದಾರೆ.
ರಷ್ಯಾದ ಎಸ್–400 ಮಾದರಿಯಲ್ಲಿ ಸ್ವದೇಶಿ ವಾಯು ರಕ್ಷಣಾ ವ್ಯವಸ್ಥೆಯಾದ ‘ಸುದರ್ಶನ ಚಕ್ರ’ವನ್ನು ಡಿಆರ್‌ಡಿಒ ಶೀಘ್ರದಲ್ಲೇ ಅಭಿವೃದ್ಧಿಪಡಿಸಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ನವದೆಹಲಿಯಲ್ಲಿರುವ ಡಿಆರ್‌ಡಿಒ ಪ್ರಧಾನ ಕಚೇರಿಯಲ್ಲಿ ಸಂಸ್ಥೆಯ 68ನೇ ಸ್ಥಾಪನಾ ದಿನಾಚರಣೆ ಅಂಗವಾಗಿ ಹಿರಿಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ಸಭೆ ನಡೆಸಿದ ವೇಳೆ ಮಾತನಾಡಿದ ಸಚಿವರು, ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ವಾಯು ಯುದ್ಧದಲ್ಲಿ ವಾಯು ರಕ್ಷಣೆಯ ಮಹತ್ವವನ್ನು ದೇಶ ಸ್ಪಷ್ಟವಾಗಿ ಕಂಡಿದೆ ಎಂದರು. ಪಾಕಿಸ್ತಾನದೊಂದಿಗೆ ನಡೆದ ವಾಯು ಸಂಘರ್ಷದ ವೇಳೆ ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರ ವ್ಯವಸ್ಥೆಗಳು ನಿರ್ಣಾಯಕ ಪಾತ್ರ ವಹಿಸಿದ್ದು, ಅವು ಯಾವುದೇ ಅಡಚಣೆಯಿಲ್ಲದೆ ಕಾರ್ಯನಿರ್ವಹಿಸಿ ಸಶಸ್ತ್ರ ಪಡೆಗಳ ಮನೋಸ್ಥೈರ್ಯವನ್ನು ಹೆಚ್ಚಿಸಿವೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ‘ಸುದರ್ಶನ ಚಕ್ರ’ ಅಭಿವೃದ್ಧಿಯ ಘೋಷಣೆ ಮಾಡಿದ್ದು, ಈ ಮಹತ್ವದ ಯೋಜನೆಯಲ್ಲಿ ಡಿಆರ್‌ಡಿಒ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಈ ಉಪಕ್ರಮದಡಿ ಮುಂದಿನ ದಶಕದಲ್ಲಿ ವಾಯು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರದ ಪ್ರಮುಖ ಮೂಲಸೌಕರ್ಯಗಳನ್ನು ಸಮಗ್ರ ವಾಯು ರಕ್ಷಣಾ ಜಾಲದೊಳಗೆ ತರಲು ಯೋಜನೆ ರೂಪಿಸಲಾಗಿದೆ ಎಂದರು.
ಡಿಆರ್‌ಡಿಒ–ಖಾಸಗಿ ವಲಯದ ಸಹಯೋಗವನ್ನು ಶ್ಲಾಘಿಸಿದ ರಕ್ಷಣಾ ಸಚಿವರು, ರಕ್ಷಣಾ ಉದ್ಯಮ, ನವೋದ್ಯಮಗಳು ಮತ್ತು ಸಣ್ಣ ಕೈಗಾರಿಕೆಗಳೊಂದಿಗೆ ಬೆಳೆಯುತ್ತಿರುವ ತೊಡಗಿಸಿಕೊಳ್ಳುವಿಕೆ ಸಮಗ್ರ ಹಾಗೂ ಸಿನರ್ಜಿಸ್ಟಿಕ್ ರಕ್ಷಣಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ ಎಂದು ಹೇಳಿದರು.
ಸಂಗ್ರಹಣೆಯಿಂದ ಹಿಡಿದು ಯೋಜನಾ ನಿರ್ವಹಣೆವರೆಗೆ, ಕಾರ್ಯವಿಧಾನಗಳನ್ನು ಸರಳ, ವೇಗ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ಡಿಆರ್‌ಡಿಒ ನಿರಂತರ ಸುಧಾರಣೆಗಳನ್ನು ಮಾಡುತ್ತಿದೆ ಎಂದು ಅವರು ತಿಳಿಸಿದರು.
ವೇಗವಾಗಿ ಬದಲಾಗುತ್ತಿರುವ ತಾಂತ್ರಿಕ ಪರಿಸರ ವ್ಯವಸ್ಥೆಗೆ ಹೊಂದಿಕೊಂಡು, ಆಳವಾದ ತಂತ್ರಜ್ಞಾನ ಹಾಗೂ ಮುಂದಿನ ಪೀಳಿಗೆಯ ತಂತ್ರಜ್ಞಾನಗಳತ್ತ ಗಮನ ಹರಿಸಲು ಡಿಆರ್‌ಡಿಒಗೆ ಸಚಿವರು ಕರೆ ನೀಡಿದರು. “ಇಂದಿನ ಯುಗವು ಕೇವಲ ವಿಜ್ಞಾನಕ್ಕಷ್ಟೇ ಸೀಮಿತವಲ್ಲ; ನಿರಂತರ ಅಭಿವೃದ್ಧಿ ಮತ್ತು ನಿರಂತರ ಕಲಿಕೆಯ ಯುಗವಾಗಿದೆ. ನಿನ್ನೆಗಿನ ಜ್ಞಾನ ಇಂದು ಅನ್ವಯವಾಗದಿರಬಹುದು. ಆದ್ದರಿಂದ ಕಲಿಕೆಯ ಪ್ರಕ್ರಿಯೆ ಎಂದಿಗೂ ಮುಗಿದಿದೆ ಎಂದು ಭಾವಿಸಬಾರದು,” ಎಂದು ಅವರು ಹೇಳಿದರು.
ಡಿಆರ್‌ಡಿಒ ಕೈಗೊಂಡಿರುವ ಈ ಪ್ರಯತ್ನಗಳು ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ಭವಿಷ್ಯದ ಸವಾಲುಗಳನ್ನು ಎದುರಿಸಲು ಭಾರತವನ್ನು ಮತ್ತಷ್ಟು ಸಿದ್ಧಗೊಳಿಸಲಿದೆ ಎಂದು ರಕ್ಷಣಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
