ನವದೆಹಲಿ, 17ಅಕ್ಟೋಬರ್ (ಹಿ.ಸ):
ಆ್ಯಂಕರ್ :ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಕಡಲ ಕುರಿತ ೩ನೇ ಆವೃತ್ತಿಯ ’ಗ್ಲೊಬಲ್ ಮ್ಯಾರಿಟೈಮ್ ಇಂಡಿಯಾ-೨೦೨೩’ ಶೃಂಗಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಮುಂಬೈನಲ್ಲಿ ಇಂದಿನಿಂದ ೧೯ರವರೆಗೆ ಶೃಂಗಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ಅವರು, ಭಾರತೀಯ ಸಾಗರ ಆರ್ಥಿಕತೆಗಾಗಿ ದೀರ್ಘಾವಧಿಯ ನೀಲನಕ್ಷೆ ಅಮೃತ್ ಕಾಲ ಮುನ್ನೋಟ-೨೦೪೭ ಅನ್ನು ಅನಾವರಣಗೊಳಿಸಲಿದ್ದಾರೆ. ಬಂದರು ಸೌಲಭ್ಯಗಳು, ಸುಸ್ಥಿರ ವಿಧಾನಗಳ ಉತ್ತೇಜನ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದ ಕಾರ್ಯತಂತ್ರ ಉಪಕ್ರಮಗಳನ್ನು ನೀಲನಕ್ಷೆ ಹೊಂದಿದೆ.
ಭಾರತೀಯ ಸಾಗರ ಆರ್ಥಿಕತೆಗೆ ’ಅಮೃತ ಕಾಲ ಮುನ್ನೋಟ-೨೦೪೭’ಕ್ಕೆ ಪೂರಕವಾಗಿ ಪ್ರಧಾನಿಯವರು ೨೩ ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನೂ ನೆರವೇರಿಸಲಿದ್ದಾರೆ.
ಭಾರತದಲ್ಲಿ ಸಾಗರ ಕುರಿತ ಅತಿ ದೊಡ್ಡ ಸಮಾವೇಶ ಇದಾಗಿದ್ದು, ಯುರೋಪ್, ಆಫ್ರಿಕಾ, ದಕ್ಷಿಣ ಅಮೆರಿಕಾ ಮತ್ತು ಏಷ್ಯಾ ದೇಶಗಳ ಸಚಿವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ, ವಿಶ್ವಾದ್ಯಂತದ ಜಾಗತಿಕ ಸಿಇಒಗಳು, ವಾಣಿಜ್ಯೋದ್ಯಮಿಗಳು, ಹೂಡಿಕೆದಾರರು, ಅಧಿಕಾರಿಗಳು ಮತ್ತು ಇತರೆ ಭಾಗಿದಾರರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
