
ನವದೆಹಲಿ, 6 ನವೆಂಬರ್ (ಹಿ.ಸ):
ಆ್ಯಂಕರ್ :ಮಿಜೋರಾಂನಲ್ಲಿ ಏಕ ಹಂತದ ಮತ್ತು ಛತ್ತೀಸ್ಗಢ ರಾಜ್ಯದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರ ನಿನ್ನೆ ಅಂತ್ಯಗೊಂಡಿದೆ. ಮಿಜೋರಾಂನ ಎಲ್ಲಾ ೪೦ ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಛತ್ತೀಸ್ಗಢದ ೯೦ ವಿಧಾನಸಭಾ ಕ್ಷೇತ್ರಗಳ ಪೈಕಿ ೨೦ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಮಂಗಳವಾರ ನಡೆಯಲಿದೆ. ಎಲ್ಲಾ ಬಗೆಯ ಮಾಧ್ಯಮಗಳಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೇ ಅಂತರ ಕಾಯ್ದುಕೊಳ್ಳುವಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ನಾಯಕರಿಗೆ ಮತ್ತು ಪ್ರಚಾರಕರಿಗೆ ಸೂಚಿಸುವಂತೆ ಚುನಾವಣಾ ಆಯೋಗ ತಿಳಿಸಿದೆ. ಈ ಮೌನದ ಅವಧಿಯಲ್ಲಿ ತಾರಾ ಪ್ರಚಾರಕರು ಮತ್ತು ಇತರ ರಾಜಕೀಯ ನಾಯಕರು ಚುನಾವಣಾ ಸಂಬಂಧಿತ ಸುದ್ದಿಗೋಷ್ಠಿ ನಡೆಸುವುದಾಗಲಿ ಅಥವಾ ಸಂದರ್ಶನ ನೀಡುವುದಾಗಲೀ ಮಾಡುವಂತಿಲ್ಲ. ೪೮ ಗಂಟೆಗಳ ಮೌನದ ಅವಧಿಯ ಪ್ರಚಾರ ನಿರ್ಬಂಧಗಳು ಸಾಮಾಜಿಕ ಮಾಧ್ಯಮಗಳಿಗೂ ಅನ್ವಯವಾಗಲಿವೆ ಎಂದು ಆಯೋಗ ತಿಳಿಸಿದೆ. ಮತದಾನ ಮುಕ್ತಾಯವಾಗುವ ೪೮ ಗಂಟೆಗಳ ಮುನ್ನ ಎಲ್ಲ ಬಗೆಯ ಪ್ರಚಾರ ಕಾರ್ಯವನ್ನು ೧೯೫೧ರ ಪ್ರಜಾಪ್ರತಿನಿಧಿ ಕಾಯ್ದೆ ನಿರ್ಬಂಧಿಸಿದೆ. ಯಾವುದೇ ಉಲ್ಲಂಘನೆಯಾಗಲಿ ದಂಡ ಅಥವಾ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್
