ನವದೆಹಲಿ, 04 ಜನವರಿ (ಹಿ.ಸ.) :
ಆ್ಯಂಕರ್ : ಆಧುನಿಕ ಯುದ್ಧದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಉದ್ದೇಶದಿಂದ ಭಾರತೀಯ ಸೇನೆಯು ‘ಭೈರವ’ ಎಂಬ ಹೊಸ ಪಡೆಯನ್ನು ರಚಿಸಿ ನಿಯೋಜನೆ ಆರಂಭಿಸಿದೆ.
ರಾಜಸ್ಥಾನದ ನಾಸಿರಾಬಾದ್‌ನಲ್ಲಿ ನೆಲೆಗೊಂಡಿರುವ ಈ ಪಡೆ, ಡ್ರೋನ್ ಆಧಾರಿತ ಯುದ್ಧ ತಂತ್ರಗಳಲ್ಲಿ ಪರಿಣತಿ ಪಡೆದಿದ್ದು, 1 ಲಕ್ಷಕ್ಕೂ ಹೆಚ್ಚು ಡ್ರೋನ್‌ಗಳನ್ನು ಕಾರ್ಯಾಚರಣೆಯಲ್ಲಿ ಬಳಸುವ ಸಾಮರ್ಥ್ಯ ಹೊಂದಿದೆ.
ಇದಕ್ಕಾಗಿ ಕಮಾಂಡೋಗಳಿಗೆ ವಿಶೇಷ ತರಬೇತಿ ನೀಡಲಾಗಿದ್ದು, ಡ್ರೋನ್‌ಗಳ ಮೂಲಕ ಶತ್ರು ಸ್ಥಾನಗಳ ಮೇಲೆ ದಾಳಿ, ವಿಚಕ್ಷಣ ಹಾಗೂ ನಿಖರ ದಾಳಿಗಳನ್ನು ನಡೆಸುವ ಕೌಶಲ್ಯವನ್ನು ಅವರು ಪಡೆದುಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ನಾಸಿರಾಬಾದ್‌ನ ಭೈರವ ಬೆಟಾಲಿಯನ್‌ನ ಕಮಾಂಡಿಂಗ್ ಅಧಿಕಾರಿ, ಇಂದಿನ ಯುದ್ಧಗಳು ವೇಗವಾಗಿ ಬದಲಾಗುತ್ತಿದ್ದು, ಅವು ಮಿಶ್ರ ಸ್ವರೂಪ ಪಡೆದುಕೊಳ್ಳುತ್ತಿವೆ ಎಂದರು. ಇಂತಹ ಪರಿಸ್ಥಿತಿಯಲ್ಲಿ ಆಧುನಿಕ ತಂತ್ರಜ್ಞಾನ, ಹೊಸ ಚಿಂತನೆ ಹಾಗೂ ಹೊಸ ಕಾರ್ಯಾಚರಣಾ ವಿಧಾನಗಳನ್ನು ಸಂಯೋಜಿಸುವುದು ಅನಿವಾರ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಭೈರವ ಬೆಟಾಲಿಯನ್‌ನ್ನು ರಚಿಸಲಾಗಿದ್ದು, ಇದು ಭಾರತೀಯ ಸೇನೆಯ ಯುದ್ಧ ಸಾಮರ್ಥ್ಯವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ತಿಳಿಸಿದ್ದಾರೆ.
ಭೈರವ ಬೆಟಾಲಿಯನ್‌ನಲ್ಲಿ ವಿಶೇಷವಾಗಿ ತರಬೇತಿ ಪಡೆದ ಮಾರಕ ಕಮಾಂಡೋ ಘಟಕಗಳಿದ್ದು, ಸಾಂಪ್ರದಾಯಿಕ ಪದಾತಿ ದಳ ಮತ್ತು ಗಣ್ಯ ಪ್ಯಾರಾ–ವಿಶೇಷ ಪಡೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.
ಈ ಪಡೆ ಚೀನಾ ಮತ್ತು ಪಾಕಿಸ್ತಾನ ಗಡಿಗಳಲ್ಲಿ ತ್ವರಿತ, ಹೆಚ್ಚಿನ ಪ್ರಭಾವ ಬೀರುವ ಹಾಗೂ ಅಗತ್ಯವಿದ್ದಲ್ಲಿ ಗಡಿಯಾಚೆಗಿನ ಕಾರ್ಯಾಚರಣೆಗಳನ್ನು ನಡೆಸಲು ವಿನ್ಯಾಸಗೊಳಿಸಲಾಗಿದೆ.
ಡ್ರೋನ್‌ಗಳು, ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಸುಧಾರಿತ ಸಂವಹನ ವ್ಯವಸ್ಥೆಗಳ ಬಳಕೆ ಇದರ ಪ್ರಮುಖ ಲಕ್ಷಣವಾಗಿದೆ. ಆಳವಾದ ದಾಳಿಗಳು, ವಿಚಕ್ಷಣ ಮತ್ತು ಶತ್ರು ಪ್ರದೇಶಗಳಿಗೆ ಒಳನುಸುಳುವಿಕೆಗಳಲ್ಲಿ ಈ ಪಡೆ ಪರಿಣತಿ ಹೊಂದಿದ್ದು, ಅತಿ ಸಂಕೀರ್ಣ ಕಾರ್ಯಾಚರಣೆಗಳಿಗಾಗಿ ಗಣ್ಯ ವಿಶೇಷ ಪಡೆಗಳನ್ನು ಮುಕ್ತಗೊಳಿಸುವ ಪಾತ್ರ ವಹಿಸಲಿದೆ.
ಭಾರತೀಯ ಸೇನೆ ಒಟ್ಟು 25 ಭೈರವ ಬೆಟಾಲಿಯನ್‌ಗಳನ್ನು ರಚಿಸುವ ಗುರಿ ಹೊಂದಿದೆ. ಮೊದಲ ಭೈರವ ಬೆಟಾಲಿಯನ್ ಕಳೆದ ವರ್ಷ ನವೆಂಬರ್‌ನಲ್ಲೇ ನಿಯೋಜನೆಗೆ ಸಿದ್ಧಗೊಂಡಿದ್ದು, ಉಳಿದ ಘಟಕಗಳ ಸಿದ್ಧತೆ ಪ್ರಗತಿಯಲ್ಲಿದೆ.
ಪ್ರತಿಯೊಂದು ಭೈರವ ಬೆಟಾಲಿಯನ್‌ನಲ್ಲಿ ಸುಮಾರು 250 ಸೈನಿಕರು ಇರಲಿದ್ದು, ಅವರು ಪದಾತಿ ದಳ, ಫಿರಂಗಿ, ಸಿಗ್ನಲ್‌ಗಳು ಮತ್ತು ವಾಯು ರಕ್ಷಣೆಯಂತಹ ವಿವಿಧ ಶಾಖೆಗಳನ್ನು ಪ್ರತಿನಿಧಿಸುತ್ತಾರೆ. ಈ ಸೈನಿಕರು ಫಿರಂಗಿ ಹಾಗೂ ವಿಮಾನ ವಿರೋಧಿ ಕ್ಷಿಪಣಿಗಳೊಂದಿಗೆ ಸಂಪೂರ್ಣವಾಗಿ ಸುಸಜ್ಜಿತರಾಗಿರುತ್ತಾರೆ.
ಸೇನೆಯ ಪದಾತಿ ದಳದ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಜಯ್ ಕುಮಾರ್ ಸಿಂಗ್ ಮಾತನಾಡಿ, ಮುಂದಿನ ಆರು ತಿಂಗಳೊಳಗೆ 25 ಗಣ್ಯ ಭೈರವ ಬೆಟಾಲಿಯನ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದರು.
ಈಗಾಗಲೇ ಐದು ಭೈರವ ಬೆಟಾಲಿಯನ್‌ಗಳನ್ನು ರಚಿಸಿ, ಅವುಗಳ ಉದ್ದೇಶಿತ ಕಾರ್ಯಾಚರಣಾ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಪದಾತಿ ದಳಗಳು, ಕಮಾಂಡೋ ಬೆಟಾಲಿಯನ್‌ಗಳು ಮತ್ತು ವಿಶೇಷ ಪಡೆಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ಶತ್ರು ದುರ್ಬಲ ಪ್ರದೇಶಗಳ ಮೇಲೆ ತ್ವರಿತ ದಾಳಿ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ಹಾಗೂ ಗಡಿ ಗಸ್ತು ತಿರುಗುವಿಕೆ ಈ ವಿಶೇಷ ಪಡೆಯ ಪ್ರಮುಖ ಉದ್ದೇಶಗಳಾಗಿವೆ ಎಂದು ಅವರು ವಿವರಿಸಿದರು.
ಈ ನಡುವೆ, ಜನವರಿ 14ರಂದು ಜೈಪುರದಲ್ಲಿ ನಡೆಯುವ ಸೇನಾ ದಿನದ ಮೆರವಣಿಗೆಯಲ್ಲಿ ಭೈರವ ಬೆಟಾಲಿಯನ್ ತನ್ನ ಸಾಮರ್ಥ್ಯಗಳ ಪ್ರದರ್ಶನ ನೀಡಲು ಸಜ್ಜಾಗಿದೆ. ಇದು ಭಾರತೀಯ ಸೇನೆಯ ಆಧುನೀಕರಣದ ಪ್ರತೀಕವಾಗಿ ದೇಶದ ಗಮನ ಸೆಳೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
