ನವದೆಹಲಿ , 3 ನವೆಂಬರ್ (ಹಿ.ಸ):
ಆ್ಯಂಕರ್ :
ಭಾರತದ ಹೂಡಿಕೆದಾರ ಸ್ನೇಹಿ ನೀತಿಗಳು ದೇಶದ ಆಹಾರ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯಲ್ಲಿ ’ವರ್ಲ್ಡ್ ಫುಡ್ ಇಂಡಿಯಾ ೨೦೨೩’ ರ ಎರಡನೇ ಆವೃತ್ತಿಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಭಾರತದ ಆಹಾರ ವೈವಿಧ್ಯತೆಯು ಜಾಗತಿಕ ಹೂಡಿಕೆದಾರರಿಗೆ ಲಾಭಾಂಶವಾಗಿದೆ ಎಂದು ಹೇಳಿದರು.
೨೧ನೇ ಶತಮಾನದಲ್ಲಿ ಜಗತ್ತು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಆಹಾರ ಭದ್ರತೆಯೂ ಒಂದು. ಆಹಾರ ಕ್ಷೇತ್ರದಲ್ಲಿ ಸ್ಟಾರ್ಟ್ಅಪ್ಗಳು ಮತ್ತು ಕಂಪನಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ ಮತ್ತು ಆಹಾರ ಸಂಸ್ಕರಣಾ ಉದ್ಯಮದ ಪ್ರತಿಯೊಂದು ವಲಯದಲ್ಲಿ ಭಾರತವು ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ. ಪ್ಯಾಕೇಜ್ಡ್ ಆಹಾರದ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಮತ್ತು ಇದು ರೈತರು, ಸ್ಟಾರ್ಟ್ಅಪ್ಗಳು ಮತ್ತು ಉದ್ಯಮಿಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದಲ್ಲಿ ಮಹಿಳೆಯರು ಆಹಾರ ಸಂಸ್ಕರಣಾ ಉದ್ಯಮವನ್ನು ಮುನ್ನಡೆಸುವ ಸ್ವಾಭಾವಿಕ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಹಿಳೆಯರಿಗೆ ಸಹಾಯ ಮಾಡಲು ಪ್ರತಿ ಹಂತದಲ್ಲೂ ಮಹಿಳಾ ಉದ್ಯಮಿಗಳು ಮತ್ತು ಸ್ವಸಹಾಯ ಗುಂಪುಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ದೇಶದ ಸುಸ್ಥಿರ ಆಹಾರ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ವಿಕಸನಗೊಂಡಿದೆ ಮತ್ತು ಭಾರತದ ಪೂರ್ವಜರು ಆಹಾರ ಪದ್ಧತಿಯನ್ನು ಆಯುರ್ವೇದದೊಂದಿಗೆ ಜೋಡಿಸಿದ್ದಾರೆ ಎಂದು ಮೋದಿ ತಿಳಿಸಿದರು.
ಭಾರತದಲ್ಲಿನ ಆಹಾರ ಜ್ಞಾನದ ಸಂಪತ್ತಿನಿಂದ ಇಡೀ ವಿಶ್ವವೇ ಲಾಭ ಪಡೆಯಲಿದೆ. ಈ ವರ್ಷ ಅಂತಾರಾಷ್ಟ್ರೀಯ ರಾಗಿ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಭಾರತವು ರಾಗಿಗೆ ಶ್ರೀ ಅನ್ನದ ಸ್ಥಾನಮಾನವನ್ನು ನೀಡಿದೆ. ರಾಗಿ ಭಾರತದ ಸೂಪರ್ಫುಡ್ ಆಗಿದೆ. ಮತ್ತು ಶೀಘ್ರದಲ್ಲೇ, ಇವು ವಿಶ್ವದ ಮೂಲೆ ಮೂಲೆಗಳನ್ನು ತಲುಪುತ್ತವೆ ಎಂದು ಅವರು ಹೇಳಿದರು.
ಸುಸ್ಥಿರ ಜೀವನಶೈಲಿಯ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಆಹಾರ ವ್ಯರ್ಥವನ್ನು ತಗ್ಗಿಸುವುದು ಮಹತ್ವದ ಪ್ರಯತ್ನವಾಗಿದೆ. ವ್ಯರ್ಥವಾಗುವುದನ್ನು ಕಡಿಮೆ ಮಾಡಲು ಉತ್ಪನ್ನಗಳನ್ನು ವಿನ್ಯಾಸಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಒಂದು ಲಕ್ಷಕ್ಕೂ ಅಧಿಕ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಬೀಜ ಬಂಡವಾಳ ಸಹಾಯವನ್ನು ವಿತರಿಸಿದರು. ಇದರಿಂದ ಪ್ಯಾಕೇಜಿಂಗ್ ಮತ್ತು ಗುಣಮಟ್ಟದ ಉತ್ಪಾದನೆಯನ್ನು ಸುಧಾರಿಸಲು ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಾಕ್ಷಾತ್ಕಾರವನ್ನು ಪಡೆಯಲು ಸಹಾಯ ಮಾಡುತ್ತದೆ.
ವರ್ಲ್ಡ್ ಫುಡ್ ಇಂಡಿಯಾ ೨೦೨೩ ರ ಭಾಗವಾಗಿ ಫುಡ್ ಸ್ಟ್ರೀಟ್ ಅನ್ನು ಪ್ರಧಾನಿ ಉದ್ಘಾಟಿಸಿದರು. ಇದು ಪ್ರಾದೇಶಿಕ ಪಾಕಪದ್ಧತಿಗಳು ಮತ್ತು ರಾಜಮನೆತನದ ಪಾಕಶಾಲೆಯ ಪರಂಪರೆಯನ್ನು ಒಳಗೊಂಡಿದೆ, ಅಲ್ಲಿ ೨೦೦ ಕ್ಕೂ ಹೆಚ್ಚು ಬಾಣಸಿಗರು ಭಾಗವಹಿಸುತ್ತಾರೆ ಮತ್ತು ಸಾಂಪ್ರದಾಯಿಕ ಭಾರತೀಯ ಪಾಕಪದ್ಧತಿಯನ್ನು ಪ್ರಸ್ತುತಪಡಿಸುತ್ತಾರೆ. ಮೂರು ದಿನಗಳ ಈ ಮೇಳವನ್ನು ಕೇಂದ್ರ ಆಹಾರ ಸಂಸ್ಕರಣಾ ಸಚಿವಾಲಯ ಆಯೋಜಿಸಿದೆ.
ಹಿಂದೂಸ್ತಾನ್ ಸಮಾಚಾರ್
