
ದೆಹಲಿ, 22 ಡಿಸೆಂಬರ್(ಹಿ.ಸ):
ಆ್ಯಂಕರ್ :
ಚಳಿಗಾಲ ಮತ್ತೆ ಬಂದಿದೆ. ಹೊಸ ವರ್ಷವೂ ಬರುತ್ತಿದೆ. ಈ ಹೊತ್ತಿನಲ್ಲೇ ಕೆಲಕಾಲ ವಿರಾಮದ ಬಳಿಕ ಕೊರೊನಾ ವೈರಸ್ನ ಹೊಸ ಉಪತಳಿ ಜೆಎನ್.1 ವಕ್ಕರಿಸಿದ್ದು, ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಹೊಸ ವರುಷವನ್ನು ಹರುಷದಿಂದ ಸ್ವಾಗತಿಸಲು ಕಾಯುತ್ತಿದ್ದವರಲ್ಲಿ ನಿರಾಸೆ ಮಡುಗಟ್ಟಿದೆ. ಮತ್ತೆ ಕೊರೊನಾ ಆತಂಕದಲ್ಲೇ ದಿನ ದೂಡುವಂತಹ ಸ್ಥಿತಿ ನಿರ್ಮಾಣವಾಗಿದೆ.
2019 ರಲ್ಲಿ ಕಾಣಿಸಿಕೊಂಡ ಕೋವಿಡ್-19 ರೂಪಾಂತರಗೊಳ್ಳುತ್ತಲೇ ಇದೆ. ಡೆಲ್ಟಾ, ಓಮಿಕ್ರಾನ್ ಕೊರೊನಾ ವೈರಸ್ನ ತಳಿಗಳು. ಇವುಗಳಲ್ಲಿ ಮತ್ತೆ ಹತ್ತು ಹಲವು ಉಪತಳಿಗಳು ಹುಟ್ಟಿಕೊಂಡಿವೆ. ಬಿಎ.2.86 ಓಮಿಕ್ರಾನ್ನ ಉಪತಳಿ. ಇದರ ಉಪತಳಿಯೇ ಜೆಎನ್.1. ಇದು ದೇಶ, ವಿದೇಶಗಳಲ್ಲಿ ವೇಗವಾಗಿ ಹರಡುತ್ತಿದ್ದು, ಜನರಲ್ಲಿ ಭೀತಿ ಹುಟ್ಟಿಸಿದೆ. ಕೋವಿಡ್ ಕಾರಣಕ್ಕೆ ಆರ್ಥಿಕ ಸಂಕಷ್ಟದಿಂದ ಬಳಲಿ ಬೆಂಡಾಗಿದ್ದ ದೇಶಗಳು ಮತ್ತೆ ಚಿಂತೆಯಲ್ಲಿ ಮುಳುಗಿವೆ. ಭಾರತದಲ್ಲಿ ಹೊಸ ತಳಿ ವೇಗವಾಗಿ ಹರಡುತ್ತಿದ್ದು, ಈಗಾಗಲೇ ರಾಜ್ಯಗಳಿಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ಮಾರ್ಗಸೂಚಿಯನ್ನೂ ಹೊರಡಿಸಲಾಗಿದೆ. ಹಾಗಾದರೆ, ಏನಿದು ಜೆಎನ್.1. ಇದು ಎಷ್ಟರ ಮಟ್ಟಿಗೆ ಅಪಾಯಕಾರಿ? ನಿಯಂತ್ರಣ ಹೇಗೆ? ಮುಂಜಾಗ್ರತಾ ಕ್ರಮಗಳೇನು?
ಏನಿದು ಜೆಎನ್.1?
ಬಿಎ.2.86 ಓಮಿಕ್ರಾನ್ನ ಒಂದು ಉಪತಳಿ. ಇದರ ಉಪತಳಿಯೇ ಜೆಎನ್.1 ಆಗಿದೆ. ಬಿಎ.2.86 ಹಾಗೂ ಜೆಎನ್.1 ಉಪತಳಿಗಳ ನಡುವೆ ಅಷ್ಟೇನು ವ್ಯತ್ಯಾಸವಿಲ್ಲ. ಸೋಂಕಿನ ಮುಳ್ಳು ಚಾಚಿಕೆಗಳಲ್ಲಿ ಸಣ್ಣದೊಂದು ಬದಲಾವಣೆ ಇದೆಯಷ್ಟೇ. ಹೊಸ ಉಪತಳಿ ಜೆಎನ್.1 ಬಹು ವೇಗವಾಗಿ ಹರಡುತ್ತದೆ. ಹೆಚ್ಚೇನು ಅಪಾಯಕಾರಿ ಅಲ್ಲ. ಆದರೆ ಎಚ್ಚರಿಕೆ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಮೊದಲು ಕಾಣಿಸಿಕೊಂಡಿದ್ದೆಲ್ಲಿ?
ಅಮೆರಿಕದಲ್ಲಿ ಸೆಪ್ಟೆಂಬರ್ ಹೊತ್ತಿಗೆ ಮೊದಲ ಬಾರಿಗೆ ಜೆಎನ್.1 ಉಪತಳಿ ಕಾಣಿಸಿಕೊಂಡಿತು. ಡಿಸೆಂಬರ್ ಮೊದಲ ವಾರದ ಹೊತ್ತಿಗೆ ಸೋಂಕಿತರ ಸಂಖ್ಯೆಯಲ್ಲಿ 15ರಿಂದ 29% ರಷ್ಟು ಏರಿಕೆಯಾಯಿತು ಎಂದು ಅಮೆರಿಕ ಆರೋಗ್ಯ ಸಂಸ್ಥೆ ತಿಳಿಸಿದೆ. ಚೀನಾ, ಸಿಂಗಾಪುರದಲ್ಲೂ ತೀವ್ರಗತಿಯಲ್ಲಿ ಹರಡುತ್ತಿದೆ. ಈ ದೇಶಗಳ ಆರೋಗ್ಯ ಸಚಿವಾಲಯಗಳು ಜನರಿಗೆ ಎಚ್ಚರಿಕೆಯ ಸೂಚನೆ ನೀಡಿವೆ. ಯುಕೆ, ಐಸ್ಲ್ಯಾಂಡ್, ಪೋರ್ಚುಗಲ್, ಸ್ಪೇನ್, ನೆದರ್ಲೆಂಡ್ಸ್ ದೇಶಗಳಲ್ಲೂ ಹೊಸ ಉಪತಳಿ ಹರಡುತ್ತಿರುವುದು ವರದಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್
