
ದೆಹಲಿ, 18 ಜನವರಿ(ಹಿ.ಸ):
ಆ್ಯಂಕರ್ :
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಪ್ರಧಾನಿ, ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಮೊತ್ತದ ಎಂಟು ಅಮೃತ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೆ, ಪ್ರಧಾನಮಂತ್ರಿ ಆವಾಸ ಯೋಜನೆ-ನಗರೀಕರಣದಡಿ ಪೂರ್ಣಗೊಂಡಿರುವ ೯೦ ಸಾವಿರಕ್ಕೂ ಹೆಚ್ಚು ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಿದ್ದಾರೆ. ಮಧ್ಯಾಹ್ನ ಕರ್ನಾಟಕಕ್ಕೆ ಆಗಮಿಸಲಿರುವ ನರೇಂದ್ರ ಮೋದಿ ಅವರು, ರಾಜಧಾನಿ ಬೆಂಗಳೂರಿನಲ್ಲಿ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ ಅನ್ನು ಉದ್ಘಾಟಿಸುವುದರ ಜೊತೆಗೆ ಬೋಯಿಂಗ್ ಸುಕನ್ಯ ಕಾರ್ಯಕ್ರಮಕ್ಕೂ ಚಾಲನೆ ನೀಡಲಿದ್ದಾರೆ. ವಿಮಾನಯಾನ ವಲಯದಲ್ಲಿ ಹೆಚ್ಚು ಹೆಣ್ಣುಮಕ್ಕಳು ಪ್ರವೇಶ ಪಡೆಯುವ ಉದ್ದೇಶದಿಂದ ಬೋಯಿಂಗ್ ಸುಕನ್ಯಾ ಕಾರ್ಯಕ್ರಮವನ್ನು ದೇಶಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ. ಸಂಜೆ ಪ್ರಧಾನಿ ಅವರು ತಮಿಳುನಾಡಿಗೆ ಭೇಟಿ ನೀಡಲಿದ್ದು, ಚೆನ್ನೈನಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ನ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಮೊದಲ ಖೇಲೋ ಇಂಡಿಯಾ ಯೂತ್ ಗೇಮ್ಸ್ ಇದಾಗಿದೆ.
ಹಿಂದೂಸ್ತಾನ್ ಸಮಾಚಾರ್
