ನವದೆಹಲಿ, 09 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನೇಪಾಳದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲಿನ ನಿರ್ಬಂಧಗಳ ವಿರುದ್ಧ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದುಕೊಂಡ ಪರಿಣಾಮ ಹಲವರು ಸಾವನ್ನಪ್ಪಿ, ಅನೇಕರಿಗೆ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಭಾರತವು ತನ್ನ ಗಾಢ ಸಂತಾಪವನ್ನು ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಸಹಾನುಭೂತಿ ಸೂಚಿಸಿದೆ.
ಭಾರತದ ವಿದೇಶಾಂಗ ಸಚಿವಾಲಯ ಮಂಗಳವಾರ ಪ್ರಕಟಣೆ ನೀಡಿದ್ದು, “ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ, ಶಾಂತಿಯುತ ಸಂವಾದದ ಮೂಲಕ ಸಮಸ್ಯೆಗಳು ಪರಿಹಾರವಾಗಲಿ” ಎಂದು ತಿಳಿಸಿದೆ.
ಅಲ್ಲದೆ, ನೇಪಾಳದಲ್ಲಿ ವಾಸಿಸುತ್ತಿರುವ ಭಾರತೀಯರು ಸ್ಥಳೀಯ ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಚ್ಚರಿಸಿದೆ.
ಸೋಮವಾರ ನಡೆದ ಪ್ರತಿಭಟನೆಗಳು ಅನೇಕ ನಗರಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಯುವಕರ ಮುನ್ನಡೆದ ಆಂದೋಲನ ಹಿಂಸಾತ್ಮಕ ಘರ್ಷಣೆಗೆ ದಾರಿ ಮಾಡಿಕೊಟ್ಟಿದೆ. ಇದರಿಂದಾಗಿ ಸರ್ಕಾರ ಕಠ್ಮಂಡು ಮತ್ತು ಇತರ ಪ್ರಮುಖ ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಿದೆ.
“ಭಾರತವು ಆಪ್ತ ನೆರೆಯ ರಾಷ್ಟ್ರವಾಗಿರುವ ಕಾರಣ, ಎಲ್ಲಾ ಪಕ್ಷಗಳು ಸಂಯಮವನ್ನು ಕಾಪಾಡಿ, ಶಾಂತಿಯುತ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲಿ ಎಂಬುದೇ ನಮ್ಮ ಆಶಯ” ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
