
ನವದೆಹಲಿ, 4 ನವೆಂಬರ್ (ಹಿ.ಸ):
ಆ್ಯಂಕರ್ :
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹವಾಮಾನ ಮತ್ತಷ್ಟು ಹದಗೆಟ್ಟಿದೆ. ಗಾಳಿಗುಣಮಟ್ಟ ’ತೀವ್ರ ಕಳಪೆ’ ಮಟ್ಟದಲ್ಲಿ ಮುಂದುವರೆದಿದೆ ಎಂದು ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ತಾತ್ಕಾಲಿಕ ರಜೆ ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ಈ ಬಾರಿ ದೀಪಾವಳಿಗೂ ಮುನ್ನವೇ ಗಾಳಿ ಗುಣಮಟ್ಟ ತೀರಾ ಹದಗೆಟ್ಟಿದ್ದು, ಉಸಿರುಗುಟ್ಟುವ ಕಳಪೆ ವಾಯು ಗುಣಮಟ್ಟದಿಂದಾಗಿ ವಾಯು ತುರ್ತುಸ್ಥಿತಿಯನ್ನು ಘೋಷಿಸಲಾಗಿದೆ. ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಪ್ರಾಥಮಿಕ ಶಾಲೆಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ನಿನ್ನೆ ಕೂಡ ರಜೆ ಘೋಷಣೆ ಮಾಡಲಾಗಿತ್ತು. ಪರಿಸ್ಥಿತಿ ಹದಗೆಟ್ಟಿರುವ ಪರಿಣಾಮ ನವದೆಹಲಿಯಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳ ಮೇಲೆ ದೆಹಲಿ ಸರ್ಕಾರ ತಡೆ ನಿಷೇಧ ಹೇರಿದೆ. ದೆಹಲಿ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುಧ್ ನಗರದಲ್ಲಿ ಡೀಸೆಲ್ ಕಾರುಗಳ ಓಡಾಟದ ಮೇಲೆ ನಿಷೇಧ ಹೇರಿದೆ. ಹವಾಮಾನ ಇಲಾಖೆಯ ಪ್ರಕಾರ ದೆಹಲಿಯ ಒಟ್ಟಾರೆ ಂಕಿI ೩೪೬ ದಾಖಲಾಗಿದ್ದು, ಅತ್ಯಂತ ಕಳಪೆ ಎಂದು ಹೇಳಲಾಗಿದೆ. ರಸ್ತೆ ಸ್ವಚ್ಛತೆ ವೇಳೆ ಏಳುವ ಧೂಳಿನ ಕಣಗಳ ನಿಯಂತ್ರಣಕ್ಕೆ ಸರ್ಕಾರ ರಸ್ತೆಗಳ ಮೇಲೆ ಮೊದಲು ನೀರು ಚುಮುಕಿಸಿ ಬಳಿಕ ಸ್ವಚ್ಛ ಮಾಡಬೇಕೆಂದು ಸೂಚಿಸಿದೆ. ಧೂಳಿನಕಣಗಳು ಏಳದಂತೆ ಎಚ್ಚರವಹಿಸಲಾಗುತ್ತಿದೆ. ರಸ್ತೆಗಳ ಯಾಂತ್ರೀಕೃತ ಗುಡಿಸುವ ವ್ಯವಸ್ಥೆ ಹೆಚ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನರು ತಮ್ಮ ವಾಹನಗಳನ್ನು ಬಿಟ್ಟು ಸಾಮೂಹಿಕ ಸಾರಿಗೆ ಮೂಲ ಬಳಸಲು ತಿಳಸಲಾಗಿದೆ. ದೆಹಲಿ ಮೆಟ್ರೋದಲ್ಲಿ ೨೦ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ. ಜನರು ಮೆಟ್ರೋವನ್ನು ಬಳಸಲು ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹದಗೆಡುತ್ತಿರುವ ವಾಯು ಗುಣಮಟ್ಟ ಸೂಚ್ಯಂಕದ ಹಿನ್ನೆಲೆಯಲ್ಲಿ ಗುರುಗ್ರಾಮ್ನಲ್ಲಿ ಸೆಕ್ಷನ್ ೧೪೪ ಜಾರಿಗೊಳಿಸಲಾಗಿದ್ದು, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ ಕೆಲವು ಸಮಾರಂಭಗಳಿಗೆ ಮಾರ್ಗಸೂಚಿ ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್
