ನವದೆಹಲಿ, 11 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಕಾರ್ ಸ್ಫೋಟದ ತನಿಖೆಯು ಭಯೋತ್ಪಾದಕ ದಾಳಿ ಎಂಬ ನಿರ್ಧಾರಕ್ಕೆ ಬಂದಿದೆ.
ದೆಹಲಿ ಪೊಲೀಸರು ಯುಎಪಿಎ ಸೆಕ್ಷನ್ 16 ಮತ್ತು 18, ಸ್ಫೋಟಕ ಕಾಯ್ದೆ ಹಾಗೂ ಬಿಎನ್‌ಎಸ್‌ನ ವಿಧಿಗಳ ಅಡಿ ಪ್ರಕರಣ ದಾಖಲಿಸಿದ್ದಾರೆ.
ಸ್ಫೋಟದಲ್ಲಿ ಇದುವರೆಗೆ 9 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಲೋಕ ನಾಯಕ್ ಜಯಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದಲ್ಲಿ ಹುಂಡೈ ಐ20 ಕಾರು ಸಂಪೂರ್ಣವಾಗಿ ನಾಶವಾಗಿದ್ದು, ಹತ್ತಿರದ ವಾಹನಗಳಿಗೂ ಹಾನಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘಟನೆಯ ಮಾಹಿತಿ ನೀಡಲಾಗಿದ್ದು, ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿ ಗಾಯಾಳುಗಳ ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡಲು ಸೂಚನೆ ನೀಡಿದ್ದಾರೆ.
“ಮಾಹಿತಿ ಸಿಕ್ಕ 10 ನಿಮಿಷಗಳೊಳಗೆ ಕ್ರೈಂ ಬ್ರಾಂಚ್ ಮತ್ತು ಸ್ಪೆಷಲ್ ಸೆಲ್ ತಂಡಗಳು ಸ್ಥಳಕ್ಕಾಗಮಿಸಿದ್ದವು. ಪ್ರತಿಯೊಂದು ಕೋನದಿಂದಲೂ ತನಿಖೆ ನಡೆಯಲಿದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಕೆಂಪುಕೋಟೆ ಸ್ಫೋಟ ಪ್ರಕರಣವನ್ನು ಈಗ ಅಧಿಕೃತವಾಗಿ ಭಯೋತ್ಪಾದಕ ದಾಳಿ ಎಂದು ಪರಿಗಣಿಸಲಾಗಿದ್ದು, ಕಠಿಣ ಕಾಯ್ದೆಗಳ ಅಡಿಯಲ್ಲಿ ತನಿಖೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
