ಕುಲ್ಗಾಮ್, 09 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗುಡ್ಡಾರ್ ಅರಣ್ಯ ಪ್ರದೇಶದಲ್ಲಿ ಸೋಮವಾರ ಆರಂಭವಾದ ಗುಂಡಿನ ಚಕಮಕಿ ಮಂಗಳವಾರವೂ ಮುಂದುವರೆದಿದೆ. ರಾತ್ರಿಯಿಡೀ ಗುಂಡಿನ ಚಕಮಕಿ ನಡೆದಿದ್ದು, ಇಂದು ಬೆಳಿಗ್ಗೆ ಭದ್ರತಾ ಪಡೆಗಳು ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಿವೆ.
ಈ ಎನ್‌ಕೌಂಟರ್‌ನಲ್ಲಿ ಈಗಾಗಲೇ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಓರ್ವ ಸ್ಥಳೀಯನಾಗಿದ್ದು, ಮತ್ತೊಬ್ಬ ಪಾಕಿಸ್ತಾನಿ ಪ್ರಜೆ ಎಂದು ಶಂಕಿಸಲಾಗಿದೆ. ವಿದೇಶಿ ಭಯೋತ್ಪಾದಕನನ್ಬು ರೆಹಮಾನ್ ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆಯ ವೇಳೆ ಸೇನಾ ಮೇಜರ್ ಒಬ್ಬರು ಗಾಯಗೊಂಡಿದ್ದಾರೆ. ಅಲ್ಲದೇ ಸಬ್-ಇನ್ಸ್‌ಪೆಕ್ಟರ್ ಪ್ರಭಾತ್ ಗೌಡ್ ಮತ್ತು ಲ್ಯಾನ್ಸ್ ನಾಯಕ್ ನರೇಂದ್ರ ಸಿಂಧು ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು. ಸೇನಾ ಮೂಲಗಳ ಪ್ರಕಾರ ಮೇಜರ್ ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ.
ಚಿನಾರ್ ಕಾರ್ಪ್ಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ದೇಶಕ್ಕಾಗಿ ಕರ್ತವ್ಯ ನಿರ್ವಹಿಸುವಾಗ ಧೈರ್ಯಶಾಲಿ ಸಬ್-ಇನ್ಸ್‌ಪೆಕ್ಟರ್ ಪ್ರಭಾತ್ ಗೌಡ್ ಮತ್ತು ಲ್ಯಾನ್ಸ್ ನಾಯಕ್ ನರೇಂದ್ರ ಸಿಂಧು ಅವರ ತ್ಯಾಗಕ್ಕೆ ನಾವು ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಅವರ ಧೈರ್ಯ ಮತ್ತು ಸಮರ್ಪಣೆ ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಎಕ್ಸ ಖಾತೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
