ಇಸ್ರೇಲ್,18 ಅಕ್ಟೋಬರ್ :
ಆ್ಯಂಕರ್ :ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಇಂದು ಇಸ್ರೇಲ್ಗೆ ಭೇಟಿ ನೀಡಲಿದ್ದಾರೆ ಎಂದು ಆ ದೇಶದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್ ಘೋಷಿಸಿದ್ದಾರೆ. ಗಾಜಾ ಪ್ರದೇಶಕ್ಕೆ ನೆರವು ಕಲ್ಪಿಸುವ ಯೋಜನೆ ರೂಪಿಸಲು, ಇಸ್ರೇಲ್ ಹಾಗೂ ವಾಷಿಂಗ್ಟನ್ ಒಪ್ಪಿಕೊಂಡಿವೆ ಎಂದು ಅವರು ಹೇಳಿದ್ದಾರೆ. ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ರಕ್ಷಣಾ ಸಚಿವಾಲಯದಲ್ಲಿ ಸುಮಾರು ಎರಡು ಗಂಟೆಗೆಳ ಕಾಲ ಮಾತುಕತೆ ನಡೆಸಿದ ನಂತರ ಬ್ಲಿಂಕನ್ ಈ ವಿಷಯ ತಿಳಿಸಿದ್ದಾರೆ. ಅಕ್ಟೋಬರ್ ೭ ರಂದು ಹಮಾಸ್ ದಾಳಿಯ ನಂತರ ಅಮೆರಿಕದ ರಾಜತಾಂತ್ರಿಕರ ಎರಡನೇ ಬಾರಿಗೆ ಇಸ್ರೇಲ್ ಭೇಟಿ ಇದಾಗಿದೆ. ಹಮಾಸ್ ಆಡಳಿತದ ಪ್ರದೇಶದ ವಿರುದ್ಧ ಇಸ್ರೇಲ್ ಭೂ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ದಿಗ್ಬಂಧನಕ್ಕೊಳಗಾದ ಗಾಜಾಪಟ್ಟಿಗೆ ವಿದೇಶಿ ನೆರವು ತಲುಪಿಸುವ ಬಗ್ಗೆ, ಅಮೆರಿಕ ಇಸ್ರೇಲ್ನಿಂದ ಭರವಸೆಯನ್ನು ಪಡೆದುಕೊಂಡಿದೆ ಎಂದು ಬ್ಲಿಂಕನ್ ಹೇಳಿದ್ದಾರೆ. ಇಸ್ರೇಲ್ ಭೇಟಿಯ ನಂತರ ಜೋ ಬೈಡನ್ ಅವರು, ಜೋರ್ಡಾನ್ಗೆ ತೆರಳಿ, ದೊರೆ ಅಬ್ದುಲ್ಲಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಅಲ್-ಸಿಸಿ ಹಾಗೂ ಪ್ಯಾಲಿಸ್ಟೈನಿಯನ್ ಪ್ರಾಧಿಕಾರದ ಅಧ್ಯಕ್ಷ ಮೆಹಮದ್ ಅಬ್ಬಾಸ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ನಡುವೆ ಗಾಜಾ ಪಟ್ಟಣದ ಮಧ್ಯಭಾಗದಲ್ಲಿರುವ ಆಸ್ಪತ್ರೆಯ ಮೇಲೆ ಇಸ್ರೇಲ್, ನಡೆಸಿದ ದಾಳಿಯಲ್ಲಿ ೨೦೦ ರಿಂದ ೩೦೦ ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ತಿಯನ್ನ ಆರೋಗ್ಯ ಸಚಿವರು ತಿಳಿಸಿದ್ದಾರೆ. ಆದರೆ, ಗಾಜಾ ನಗರದ ಆಸ್ಪತ್ರೆಯಲ್ಲಿ ನೂರಾರು ಜನರು ಸ್ಪೋಟದಿಂದ ಮೃತಪಟ್ಟಿರುವ ಘಟನೆಯಲ್ಲಿ ಇಸ್ರೇಲ್ ಭಾಗಿಯಾಗಿಲ್ಲ. ಪ್ಯಾಲೆಸ್ತಿಯನ್ನ ರಾಕೆಟ್ನಿಂದ ಈ ಸ್ಪೋಟ ಸಂಭವಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ. ಮತ್ತೊಂದೆಡೆ ಆಸ್ಪತ್ರೆಗೆ ಅಪ್ಪಳಿಸಿರುವ ರಾಕೆಟ್ ಉಡಾವಣೆಯ ವೈಫಲ್ಯಕ್ಕೆ ಪ್ಯಾಲೆಸ್ತಿನಿಯನ್ ಇಸ್ಲಾಮಿಕ್ ಜಿಹಾದ್ ಗುಂಪು ಕಾರಣವಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರರು ಸುದ್ದಿಗಾರರಿಗೆ ತಿಳಿಸಿದ್ದಾರೆ.
