ಪರ್ತ್, 11 ಫೆಬ್ರವರಿ :
ಆ್ಯಂಕರ್:
ಜಾಗತಿಕ ಮಟ್ಟದಲ್ಲಿ ಭಾರತ ತನ್ನ ಹೆಜ್ಜೆಗುರುತನ್ನು ಇಟ್ಟಿದೆ. ಅತ್ಯಂತ ಕಡಿಮೆ ಸಮಯದಲ್ಲಿ ನಮ್ಮ ದೇಶ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಪರ್ತ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಆಸ್ಟ್ರೇಲಿಯಾದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತ ಹೊಂದಿರುವ ಅತ್ಯಂತ ಪರಿಣಾಮಕಾರಿ ಸಂಬಂಧವೆಂದು ಪರಿಗಣಿಸುತ್ತದೆ. ಭಾರತ-ಆಸ್ಟ್ರೇಲಿಯಾ ಸಂಬಂಧವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈ ಪಾಲುದಾರಿಕೆಯನ್ನು ನಿರ್ಮಿಸಲು ಎರಡೂ ರಾಷ್ಟ್ರಗಳು ಬದ್ಧವಾಗಿವೆ ಎಂದು ಅವರು ಹೇಳಿದರು. ಆಸ್ಟ್ರೇಲಿಯಾದೊಂದಿಗಿನ ವ್ಯಾಪಾರವು ಸ್ಥಿರವಾಗಿ ಹೆಚ್ಚುತ್ತಿದೆ ಮತ್ತು ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯವೂ ಬೆಳೆಯುತ್ತಿದೆ ಎಂದು ತಿಳಿಸಿದರು. ರಕ್ಷಣಾ ಮತ್ತು ಭದ್ರತೆಯ ಕುರಿತು ವಿದೇಶಾಂಗ ಸಚಿವರು, ಎರಡೂ ರಕ್ಷಣಾ ಪಡೆಗಳು ಪಾಲುದಾರರಾಗಿ ಬಹಳ ನಿಕಟವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಪರಸ್ಪರ ಉತ್ತಮ ಬೆಂಬಲವನ್ನು ನೀಡುತ್ತವೆ. ಮುಂದಿನ ೨೫ ವರ್ಷಗಳಲ್ಲಿ ಭಾರತವನ್ನು ಗಮನಾರ್ಹ ರೀತಿಯಲ್ಲಿ ಪರಿವರ್ತಿಸಲಾಗುವುದು. ೨೦೪೭ ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಜೈ ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು. ಜೈಶಂಕರ್ ಅವರು ಸಂಸದರಾದ ಝನೆಟಾ ಮಸ್ಕರೇನ್ಹಸ್, ವರುಣ್ ಘೋಷ್ ಮತ್ತು ಆಸ್ಟ್ರೇಲಿಯಾದ ಡಾ. ಜಗದೀಶ್ ಕೃಷ್ಣನ್ ಅವರೊಂದಿಗೆ ಸಮಾಲೋಚನೆ ನಡೆಸಿ ಪಶ್ಚಿಮ ಆಸ್ಟ್ರೇಲಿಯಾದೊಂದಿಗಿನ ಸಂಬಂಧವನ್ನು ವೃದ್ಧಿಸುವ ಕುರಿತು ಚರ್ಚಿಸಿದರು. ಪಶ್ಚಿಮ ಆಸ್ಟ್ರೇಲಿಯಾದ ರೋಜರ್ ಕುಕ್ ಅವರನ್ನು ಭೇಟಿ ಮಾಡಿ ಭಾರತ-ಆಸ್ಟ್ರೇಲಿಯಾ ಸಹಕಾರ ಸಂಬಂಧ ಹೆಚ್ಚಿಸುವ ಕುರಿತು ಕೈಗೊಳ್ಳಬೇಕಾಗಿರುವ ಯೋಜನೆಗಳು ಹಾಗೂ ಇನ್ನಿತರ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.
