
ಬೆಂಗಳೂರು, 5 ಫೆಬ್ರವರಿ :
ಆ್ಯಂಕರ್ : ‘ಬಿಗ್ ಬಾಸ್ ಕನ್ನಡ ಸೀಸನ್ 10’ ಪೂರ್ಣಗೊಂಡಿದೆ. ಉಳಿದ ಸೀಸನ್ಗಳಿಗೆ ಹೋಲಿಕೆ ಮಾಡಿದರೆ ಈ ಸೀಸನ್ ಭರ್ಜರಿ ಟಿಆರ್ಪಿ ಪಡೆದುಕೊಂಡಿದೆ. ಎಲ್ಲ ಕಡೆಗಳಿಂದ ಈ ಸೀಸನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಖುಷಿಯಲ್ಲಿ ‘ಬಿಗ್ ಬಾಸ್ ಒಟಿಟಿ’ ಸೀಸನ್ ಆರಂಭಿಸಲು ವಾಹಿನಿಯವರು ಚಿಂತನೆ ನಡೆಸಿದ್ದಾರೆ ಎಂದು ವರದಿ ಆಗಿದೆ. 40 ದಿನಗಳ ಒಟಿಟಿ ಸೀಸನ್ ಬಂದರೆ ಯಾರೆಲ್ಲ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.
ಕಳೆದ ವರ್ಷ ಅಂದರೆ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭಕ್ಕೂ ಮೊದಲು ಒಟಿಟಿ ಸೀಸನ್ ಪ್ರಸಾರ ಕಂಡಿತ್ತು. ಸೋನು ಗೌಡ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಆರ್ಯವರ್ಧನ್ ಗುರೂಜಿ ಸೇರಿ ಅನೇಕರು ಒಟಿಟಿ ಸೀಸನ್ಗೆ ಸ್ಪರ್ಧಿಗಳಾಗಿ ಬಂದಿದ್ದರು. ಈ ಒಟಿಟಿ ಸೀಸನ್ ಮುಗಿದ ಬಳಿಕ ಟಿವಿ ಸೀಸನ್ ಆರಂಭಿಸಲಾಯಿತು. ಈ ಬಾರಿ ಬೇರೆಯದೇ ಪ್ಯಾಟರ್ನ್ ಅನುಸರಿಸಲಾಗುತ್ತಿದೆ ಎನ್ನಲಾಗಿದೆ.
ಈಗಾಗಲೇ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಪೂರ್ಣಗೊಂಡಿದೆ. ಈ ಸೀಸನ್ ಯಶಸ್ವಿ ಆಗಿದೆ. ಕಾರ್ತಿಕ್ ಮಹೇಶ್ ಅವರು ಗೆದ್ದು ಬೀಗಿದರೆ, ಡ್ರೋನ್ ಪ್ರತಾಪ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಈ ಶೋ ಮುಗಿದ ಬಳಿಕ ಬಿಗ್ ಬಾಸ್ ಮನೆಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆಯಂತೆ. ಹೀಗಾಗಿ, ಒಟಿಟಿ ಸೀಸನ್ ಆರಂಭ ಆಗಬಹುದು ಎಂದು ಅನೇಕರು ಊಹಿಸಿದ್ದಾರೆ.
