ಹೈದರಾಬಾದ್,25ನವೆಂಬರ್ (ಹಿ.ಸ):
ಆ್ಯಂಕರ್ :
ತೆಲುಗು ಚಿತ್ರರಂಗದಲ್ಲಿ ಮಾಸ್ ಮಸಾಲ ಸಿನಿಮಾಗಳಿಗೆ ಪ್ರೇಕ್ಷಕರು ಹೆಚ್ಚು. ಸ್ಟಾರ್ ನಟರಾಗಬೇಕೆಂದರೆ ಮಾಸ್ ಪ್ರೇಕ್ಷಕರು ಇಷ್ಟಪಡುವ ಕಮರ್ಶಿಯಲ್ ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ಅಲಿಖಿತ ನಿಯಮ. ಆದರೆ ನಟ ನಾನಿ ಆ ಸೂತ್ರ ಮುರಿಯುತ್ತಿರುವ ಕೆಲವೇ ನಟರಲ್ಲಿ ಒಬ್ಬರು. ಮಾಸ್ ಮಸಾಲಾ ಸಿನಿಮಾಗಳನ್ನು ಆಗಾಗಲಷ್ಟೆ ಮಾಡುವ ನಾನಿ ಬಹುತೇಕ ಆಯ್ದುಕೊಳ್ಳುವುದು ಕೌಟುಂಬಿಕ ಕತೆಗಳನ್ನು, ಸುಂದರವಾದ, ಸರಳವಾದ ಪ್ರೇಮಕತೆಗಳನ್ನೇ. ಇದೀಗ ಮತ್ತೊಮ್ಮೆ ಅಂಥಹುದೇ ಸುಂದರವಾದ ಕತೆಯೊಟ್ಟಿಗೆ ಬಂದಿದ್ದಾರೆ. ಸಿನಿಮಾದ ಹೆಸರು ‘ಹಾಯ್ ನಾನ್ನ’.
‘ಹಾಯ್ ನಾನ್ನ’ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ನೋಡಿದವರೆಲ್ಲ ವಾವ್ ಎನ್ನುತ್ತಿದ್ದಾರೆ. ಹೈಪ್ ಸೃಷ್ಟಿಸಿರುವ ಮಾಸ್ ಮಸಾಲಾ ಸಿನಿಮಾಗಳ ಮಾದರಿಯಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ‘ಹಾಯ್ ನಾನ್ನ’ ಸಿನಿಮಾದ ಬಗ್ಗೆ ಚರ್ಚೆಯಾಗುತ್ತಿದೆ. ಹಲವು ಸಿನಿಮಾದ ಟ್ರೈಲರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹೆಸರೇ ಹೇಳುವಂತೆ ‘ಹಾಯ್ ನಾನ್ನ’ ಸಿನಿಮಾವು ಅಪ್ಪ-ಮಗಳ ನಡುವಿನ ಕತೆ. ಸಿನಿಮಾದ ಟ್ರೈಲರ್ನಲ್ಲಿ ಬಿಟ್ಟುಕೊಟ್ಟಿರುವ ಕತೆಯ ಎಳೆಯ ಪ್ರಕಾರ, ನಾನಿಗೆ ಮಗಳೊಬ್ಬಳಿದ್ದಾಳೆ, ಆಕೆಗೆ ತನ್ನ ತಾಯಿ ಯಾರು ಯಾಕೆ ತಮ್ಮೊಂದಿಗಿಲ್ಲ ಎಂಬ ಕೊರಗು, ಆದರೆ ನಾನಿಗೆ ತನ್ನ ಮಗಳ ತಾಯಿ ಯಾರು ಯಾಕೆ ಆಕೆ ನಮ್ಮೊಂದಿಗಿಲ್ಲ ಎಂದು ಹೇಳುವ ಇಷ್ಟವಿಲ್ಲ. ನಾನಿ ಹಾಗೂ ಆತನ ಪತ್ನಿಯ ನಡುವೆ ಏನಾಯ್ತು? ಯಾಕೆ ಅವರಿಬ್ಬರೂ ದೂರಾದರು ಎಂಬುದೇ ಸಿನಿಮಾದ ಕತೆ.
ಹಿಂದೂಸ್ತಾನ್ ಸಮಾಚಾರ್
