ಅಯೋಧ್ಯೆ, 23 ಜನವರಿ(ಹಿ.ಸ):
ಆ್ಯಂಕರ್ :
ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜನವರಿ 22ರಂದು ಅದ್ದೂರಿಯಾಗಿ ನೆರವೇರಿದೆ. ಐತಿಹಾಸಿಕ ಕ್ಷಣಕ್ಕೆ ಇಡೀ ದೇಶವೇ ಸಾಕ್ಷಿ ಆಯಿತು. ಈ ಶುಭ ದಿನದಂದು ರಾಮಾಯಣಕ್ಕೆ ಸಂಬಂಧಿಸಿದ ಸಿನಿಮಾಗಳು ಸೆಟ್ಟೇರಿವೆ. ‘ಶ್ರೀ ರಾಮ್ ಜೈ ಹನುಮಾನ್’ ಹೆಸರಿನ ಸಿನಿಮಾ ಸೆಟ್ಟೇರಿತ್ತು. ಅದೇ ರೀತಿ ‘ಹನುಮಾನ್’ ಚಿತ್ರದ ಸೀಕ್ವೆಲ್ ‘ಜೈ ಹನುಮಾನ್’ ಸ್ಕ್ರಿಪ್ಟ್ ಪೂಜೆ ನಡೆದಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಸೀಕ್ವೆಲ್ ಬಗ್ಗೆ ಆಸಕ್ತಿ ತೋರಿಸಿದ್ದಾರೆ.
ಪ್ರಶಾಂತ್ ವರ್ಮಾ ನಿರ್ದೇಶನದ, ತೇಜ ಸಜ್ಜಾ ನಟನೆಯ ‘ಹನುಮಾನ್’ ಸಿನಿಮಾ ಜನವರಿ 12ರಂದು ರಿಲೀಸ್ ಆಯಿತು. ವರಲಕ್ಷ್ಮಿ ಶರತ್ಕುಮಾರ್, ಕನ್ನಡದ ನಟಿ ಅಮೃತ ಅಯ್ಯರ್ ಮತ್ತು ವಿನಯ್ ರೈ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗೆಲುವು ಕಂಡಿದೆ. ಈ ಯಶಸ್ಸಿನ ಬೆನ್ನಲ್ಲೇ ನಿರ್ದೇಕರು ‘ಜೈ ಹನುಮಾನ್’ ಚಿತ್ರದ ಕೆಲಸ ಆರಂಭಿಸಿದ್ದಾರೆ.
‘ಹನುಮಾನ್’ ಸಿನಿಮಾ ಮೂಲಕ ನಿರ್ದೇಶಕ ಪ್ರಶಾಂತ್ ವರ್ಮಾ ರಾಷ್ಟ್ರವ್ಯಾಪಿ ಖ್ಯಾತಿ ಪಡೆದಿದ್ದಾರೆ. ಈಗ ರೆಡಿ ಆಗುತ್ತಿರುವ ಸಿನಿಮಾ ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ ಅಡಿಯಲ್ಲಿ ಸಿದ್ಧವಾಗಲಿದೆ. ಈಗಾಗಲೇ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ ಮಾಡಲಾಗಿದೆ. ಹೈದರಾಬಾದ್ನ ಹನುಮಾನ್ ದೇವಾಲಯದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ತಂಡ ಮಾಹಿತಿ ನೀಡಲಿದೆ.
‘ಹನುಮಾನ್’ ಕಥೆ
ಒಂದು ಗ್ರಾಮದ ಸಾಮಾನ್ಯ ವ್ಯಕ್ತಿಗೆ ಹನುಮಂತನಿಂದ ಸೂಪರ್ ಪವರ್ ಸಿಗುತ್ತದೆ. ಇದರಿಂದ ಅವನು ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಾನೆ. ಈ ಚಿತ್ರ ಸಂಕ್ರಾಂತಿ ಸಂದರ್ಭದಲ್ಲೇ ರಿಲೀಸ್ ಆಗಿದ್ದರಿಂದ ಜನರು ಚಿತ್ರವನ್ನು ಹೆಚ್ಚು ಇಷ್ಟಪಟ್ಟಿದ್ದರು. ಈ ಸಿನಿಮಾ ಮೂಲಕ ತೇಜ ಸಜ್ಜಾ ಗೆಲುವಿನ ನಗೆ ಬೀರಿದರು.
ಹಿಂದೂಸ್ತಾನ್ ಸಮಾಚಾರ್
