ಹೈದರಾಬಾದ್ , 11ನವೆಂಬರ್ (ಹಿ.ಸ):
ಆ್ಯಂಕರ್ :
ತೆಲುಗು ಚಿತ್ರರಂಗದ ಜನಪ್ರಿಯ ನಟ ಚಂದ್ರಮೋಹನ್ ಇಂದು (ನವೆಂಬರ್ 11) ನಿಧನ ಹೊಂದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳುಗಳಿಂದಲೂ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಚಂದ್ರಮೋಹನ್ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಹಲವು ದಶಕಗಳಿಂದಲೂ ತೆಲುಗು ಚಿತ್ರರಂಗದಲ್ಲಿ ನಟಿಸುತ್ತಿದ್ದ ಚಂದ್ರ ಮೋಹನ್ ನಿಧನಕ್ಕೆ ತೆಲುಗು ಚಿತ್ರರಂಗದ ದಿಗ್ಗಜ ನಟ, ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಚಂದ್ರಮೊಹನ್ ಅವರನ್ನು ಹೈದರಾಬಾದ್ನ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಿಗ್ಗೆ 9:57ಕ್ಕೆ ನಿಧನ ಹೊಂದಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ. ನವೆಂಬರ್ 13ಕ್ಕೆ ಚಂದ್ರಮೋಹನ್ ಅವರ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಶನಿವಾರ ಮತ್ತು ಭಾನುವಾರ ಚಂದ್ರಮೊಹನ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಚಂದ್ರಮೋಹನ್ 1966ರಿಂದಲೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆರಂಭದ ಕೆಲ ವರ್ಷ ಹಲವು ಸಿನಿಮಾಗಳಲ್ಲಿ ನಾಯಕರಾಗಿಯೂ ಚಂದ್ರಮೋಹನ್ ನಟಿಸಿದ್ದರು. ತೆಲುಗು ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಕೆಲವಾದ ‘ಶಂಕರಭಾರಣಂ’, ‘ಸಿರಿಸಿರಿ ಮುವ್ವ’, ‘ರಾಧಾ ಕಲ್ಯಾಣಂ’, ‘ನಾಕೂ ಪೆಳ್ಳಾಂ ಕಾವಾಲಿ’ ಇನ್ನೂ ಅನೇಕ ಸಿನಿಮಾಗಳಲ್ಲಿ ಚಂದ್ರಮೋಹನ್ ನಟಿಸಿದ್ದಾರೆ. 900 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಚಂದ್ರಮೋಹನ್ ನಟಿಸಿದ್ದಾರೆ. 2017ರಲ್ಲಿ ಬಿಡುಗಡೆ ಆದ ‘ಆಕ್ಸಿಜನ್’ ಅವರು ನಟಿಸಿದ ಕೊನೆಯ ಸಿನಿಮಾ.
ಹಿಂದೂಸ್ತಾನ್ ಸಮಾಚಾರ್
